ಸೊರಬ: ಮಕ್ಕಳ ಕಲಿಕೆ ಹಾಗೂ ಪ್ರತಿಭೆ ಪ್ರದರ್ಶನಕ್ಕೆ ಶಾಲೆಗಳಲ್ಲಿ ಪೂರಕ ವಾತಾವರಣ ರೂಪಿಸಲಾಗುತ್ತಿದೆ ಎಂದು ಕೆಡಿಪಿ ಸದಸ್ಯ ಸದಾನಂದಗೌಡ ಪಾಟೀಲ್ ಹೇಳಿದರು.
ತಾಲೂಕಿನ ಜಡೆ ಹೋಬಳಿಯ ತುಮರಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಪ್ರತಿಭಾ ಕಾರಂಜಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ತುಮರಿಕೊಪ್ಪ ಸರ್ಕಾರಿ ಶಾಲೆಗೆ ನೂರು ವರ್ಷ ಸಮೀಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸಲಾಗುವುದು ಎಂದರು. ಮಕ್ಕಳು ಮಾಡಿದ್ದ ಮಣ್ಣಿನ ನವಿಲು ಮಾದರಿ ನೋಡುಗರ ಗಮನ ಸೆಳೆಯಿತು.
ಛದ್ಮವೇಷ, ಅಭಿನಯ ಗೀತೆ, ಪ್ರಾಣಿ-ಪಕ್ಷಿಗಳ ಮಿಮಿಕ್ರಿ, ಪ್ರಬಂಧ, ಧಾರ್ಮಿಕ ಪಠಣ, ಕಂಠಪಾಠ, ಆಶುಭಾಷಣ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ಎಸ್‌ಡಿಎಂಸಿ ಅಧ್ಯಕ್ಷ ಮಾರ್ತ್ಯಪ್ಪ, ಮುಖ್ಯಶಿಕ್ಷಕ ಮೃತ್ಯುಂಜಯ ಗೌಡ, ಶಿಕ್ಷಣ ಸಂಯೋಜಕ ಅರುಣ್‌ಕುಮಾರ್, ಸಿಆರ್‌ಪಿ ರಾಜು ಗಂಜೇರ್, ಕೆ.ಸಿ.ಶಿವಕುಮಾರ್, ಗಣಪತಿ, ಪ್ರಕಾಶ್ ಮಡ್ಲೂರ್, ಕುಮಾರ್, ಓಂಕಾರ ಇತರರಿದ್ದರು.