ನ್ಯೂಸ್

ರಾಮಭಕ್ತರಲ್ಲಿ ಭಯಹುಟ್ಟಿಸಲು ಕಾಂಗ್ರೆಸ್ ಕುತಂತ್ರ; ಬಿ.ವೈ.ವಿಜಯೇಂದ್ರ ಟೀಕೆ

ಬೆಂಗಳೂರು: ರೈತರು, ಹಿಂದು, ರಾಮ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದು, ಬುಧವಾರ ರಾಜ್ಯಾದ್ಯಂತ ನಡೆಯಲಿರುವ ಹೋರಾಟದಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಹೆಬ್ಬಾಳದ ಜಿ.ಆರ್.ಕಲ್ಯಾಣ ಮಂಟಪದಲ್ಲಿ ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಘಟಕ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಸಂಬಂಧ ಜನರಲ್ಲಿ ಜಾಗೃತಿ ಮೂಡಿದ್ದು, ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ಇದರಿಂದಾಗಿ ರಾಮಭಕ್ತರಲ್ಲಿ ಭಯ

ಮೂಡಿಸುವ ಕುತಂತ್ರ ಹೂಡಿದ್ದಾರೆ ಎಂದು ಟೀಕಿಸಿದರು.

ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಕಳೆದ 30 ವರ್ಷಗಳಿಂದ ರಸ್ತೆಯಲ್ಲಿ ಓಡಾಡುತ್ತದೆ. 31 ವರ್ಷಗಳ ಹಿಂದಿನ ಪ್ರಕರಣ ಕೆದಕಿ ನೋಟಿಸ್ ಕೊಡದೆ ಬಂಧಿಸಿದೆ. ಸರ್ಕಾರದ ಈ ನಡೆ ಖಂಡಿಸಿ ಬುಧವಾರ ಪ್ರತಿಭಟನೆ ನಡೆಯಲಿದ್ದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ನಷ್ಟದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಪೀಡಿತ ರೈತರ ಬೆಳೆ ಹಾನಿಗೆ ಪರಿಹಾರ ಕೊಡುತ್ತಿಲ್ಲ. ಆದರೆ ಮುಸ್ಲಿಮರಿಗೆ 11 ಸಾವಿರ ಕೋಟಿ ರೂ. ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಹಿಂದುಗಳನ್ನು ಬೆದರಿಸುವ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುವರು ಎಂದು ಬಿ.ವೈ.ವಿಜಯೇಂದ್ರ ಪುನರುಚ್ಚರಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಸಿಎಂ ಸಿದ್ದರಾಮಯ್ಯ ಒಡೆದಾಳುವ ನೀತಿಯಲ್ಲಿ ನಿಸ್ಸೀಮರಾಗಿದ್ದಾರೆ. ಮತ ರಾಜಕಾರಣಕ್ಕೆ ಹಿಂದು-ಮುಸ್ಲಿಮರನ್ನು ವಿಭಜಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಇದೇ ಸಂದರ್ಭದಲ್ಲಿ ಆರ್.ಅಶೋಕ್ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ, ಬೈರತಿ ಬಸವರಾಜ, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಪ್ರಧಾನ ಕಾರ್ಯದರ್ಶಿ ನಂದೀಶ್‌ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣಗೌಡ, ಶಾಸಕರು, ಮುಖಂಡರು ಇದ್ದರು.