ಬೆಂಗಳೂರು: ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಹೇಳುವ ನೈತಿಕತೆಯೂ ಆ ಪಕ್ಷಕ್ಕೆ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿತು. ಬಾಬಾಸಾಹೇಬ್ ಪರಿನಿರ್ವಾಣವಾದ ದಿನ ಗೌರವಯುತವಾಗಿ ಅವರ ಶವ ಸಂಸ್ಕಾರ ಮಾಡಲಿಲ್ಲ, ದೆಹಲಿಯಲ್ಲಿ ತುಂಡು ಭೂಮಿಯನ್ನೂ ನೀಡಲಿಲ್ಲವೆಂದು ಕುಟುಕಿದರು.
ನೆಹರೂ ಸ್ಮಾರಕಕ್ಕೆ 30 ಎಕರೆ, ಇಂದಿರಾಗಾಂಧಿ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಲಿಲ್ಲ ?. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರ್ ೋಷಿಸಿ ಉದ್ಘಾಟಿಸಿದ್ದಾರೆ ಎಂದರು.
ಸಂವಿಧಾನಶಿಲ್ಪಿಯ ಜೀವನ, ಸಾಧನೆ ಮುಂದಿನ ಪೀಳಿಗೆಗೆ ತಿಳಿಸಲು, ಗೌರವಿಸಲು ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ಸಿಗರಿಂದ ಬಿಜೆಪಿ ತಿಳಿದುಕೊಳ್ಳಬೇಕಾಗಿಲ್ಲ ಎಂದು ಛೇಡಿಸಿದರು.
ಬಿ.ಆರ್.ಅಂಬೇಡ್ಕರ್ ಪರಿಶ್ರಮ, ದೂರದೃಷ್ಟಿಯಿಂದ ರಚಿಸಿದ ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ನೀಡುವುದು ಮೋದಿ ಧ್ಯೇಯವಾಗಿದೆ. ದೇಶದ ಸಂವಿಧಾನ ಈ ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆ, ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ಅತಿ ಉದ್ದವಾದ ಲಿಖಿತ ಸಂವಿಧಾನವೆಂಬ ಹೆಸರು ಗಳಿಸಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿದ ಕಾಂಗ್ರೆಸ್ ಪಕ್ಷದವರು ದೀನ ದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಡಾ.ಅಂಬೇಡ್ಕರ್ ಬಯಸಿದಂತೆ ಅಸ್ಪೃಶ್ಯರು ಮತ್ತು ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲವೆಂದು ದೂರಿದರು.
ಶಿಕ್ಷಣದಿಂದ ವಂಚಿತ, ಬಡತನದಲ್ಲಿ ಹೊರಗೆ ಬರಲಾಗದ ದಲಿತರನ್ನು ಮೇಲೆತ್ತಲು ಶಿಕ್ಷಣಕ್ಕೆ ಒತ್ತು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಅಕ್ಕಿ, ಬೇಳೆ, ಕುರಿ, ಕೋಳಿ ಕೊಡುತ್ತೇನೆ ಎನ್ನುತ್ತಿದ್ದು, ದಲಿತರು ಅದನ್ನು ನಿರಾಕರಿಸಿ ಶಿಕ್ಷಣ ನೀಡುವಂತೆ ಒತ್ತಾಯಿಸಬೇಕು ಎಂಬ ಸಲಹೆ ನೀಡಿದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ ಡಾ.ಅಂಬೇಡ್ಕರ್ ವ್ಯಕ್ತಿತ್ವ, ಗೌರವ-ಘನತೆಗೆ ತಕ್ಕಂತೆ ಅವರು ಬದುಕಿದ್ದಾಗಲೇ ಭಾರತರತ್ನ ನೀಡಬೇಕಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಪ್ರಸ್ತಾಪಕ್ಕೆ ಬಿಜೆಪಿ ಬೆಂಬಲಿತ ಸರ್ಕಾರದ ಪ್ರಧಾನಿ ವಿ.ಪಿ.ಸಿಂಗ್ ಪ್ರದಾನ ಮಾಡಿದರು. ಡಾ.ಅಂಬೇಡ್ಕರ್‌ಗೆ 33 ವರ್ಷಗಳು ತಡವಾಗಿ ನ್ಯಾಯ ದೊರೆಯಿತು ಎಂದರು.
ಅಕ್ಕಿ, ಕುರಿ, ಕೋಳಿ ಆಸೆಗೆ ಮೈಮರೆತರೆ ರಾಷ್ಟ್ರ ವಿನಾಶಕ್ಕೆ ದಾರಿಯಾಗಲಿದೆ. ಸಂವಿಧಾನ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಿ.ಟಿ.ರವಿ ಹೇಳಿದರು. ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.