ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶಾಲಾ ಶಿಕ್ಷಣ ಇಲಾಖೆ ಈ ಬಾರಿ 5, 8 ಮತ್ತು 9ನೇ ತರಗತಿಗೆ ಮಂಡಳಿಯಿಂದ ಅಥವಾ ಶಾಲೆಯಲ್ಲಿ ಪರೀಕ್ಷೆ ನಡೆಸಲಿದೆಯೇ ಎಂಬ ಗೊಂದಲ ಮುಂದುವರಿದಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಗೆ ಸಂಕಲಾತ್ಮಕ (ಎಸ್ಎ1 ಮತ್ತು 2) ಮತ್ತು ರೂಪಣಾತ್ಮಕ ಮೌಲ್ಯಾಂಕನಗಳನ್ನು (ಎಫ್ಎ 1, 2, 3, 4) ಶಾಲಾ ಹಂತದಲ್ಲಿ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಇಲಾಖೆ ವತಿಯಿಂದ ಹೊರಡಿಸುವ ಸುತ್ತೋಲೆ ಮತ್ತು ಜ್ಞಾಪನಗಳನ್ನು ಅನುಸರಿಸುವಂತೆ ನಿರ್ದೇಶನ ನೀಡಿದೆ. ಆದರೆ, ಪ್ರಕರಣವು ಸುಪ್ರೀಂಕೋರ್ಟ್ನಲ್ಲಿರುವ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ.
5,8 ಮತ್ತು 9ನೇ ತರಗತಿ ಮೌಲ್ಯಾಂಕನ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದ್ದು, ಅಂತಿಮ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ. ಈ ಬಗ್ಗೆಯೂ ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ. ಇದರಿಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಲ್ಲಿ ಗೊಂದಲ ಮುಂದುವರಿದಿದೆ. ಸುಪ್ರೀಂಕೋರ್ಟ್ನ ಅಂತಿಮ ತೀರ್ಪು ಪ್ರಕಟವಾದ ಬಳಿಕ ಶಾಲಾ ಹಂತವೋ ಮಂಡಳಿ ಪರೀಕ್ಷೆಗೆಯೋ ಎಂಬ ಗೊಂದಲಕ್ಕೆ ಸ್ಪಷ್ಟತೆ ಸಿಗಲಿದೆ.
ಪ್ರಸ್ತುತ ಶಿಕ್ಷಣ ಹಕ್ಕು ಕಾಯ್ದೆ-2019ರ ತಿದ್ದುಪಡಿಯಲ್ಲಿ ಮಕ್ಕಳ ಕಲಿಕಾ ಮಟ್ಟ ತಿಳಿಯುವ ಉದ್ದೇಶದಿಂದ 5 ಮತ್ತು 8ನೇ ತರಗತಿಗೆ ಮೌಲ್ಯಾಂಕನ ಮಾಡಬಹುದು ಎಂಬ ನಿಯಮವಿದೆ. ಆದರೆ, ಮಂಡಳಿ ಹಂತದಲ್ಲಿ ಎಂಬ ನಿಯಮವಿಲ್ಲ. ಒಂದು ವೇಳೆ ಮಂಡಳಿ ಹಂತದಲ್ಲಿ ಮೌಲ್ಯಾಂಕನ ನಡೆಸಬೇಕಾದರೆ, ರಾಜ್ಯ ಸರ್ಕಾರವು ಆರ್ಟಿಇ ನಿಯಮಗಳಿಗೆ ತಿದ್ದುಪಡಿ ತಂದು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಈ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಿಲ್ಲ. ಈ ಎಲ್ಲ ಕಾರಣಗಳಿಂದ ಮೌಲ್ಯಾಂಕನ ಗೊಂದಲ ಮುಂದುವರಿದಿದೆ.
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸುವಂತೆ ಸ್ಪಷ್ಟ ಆದೇಶವಿದ್ದರೂ ವಿದ್ಯುತ್ ಬಿಲ್ ವಸೂಲಿ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಸೂಚಿಸಿದೆ.
‘ವಿಜಯವಾಣಿ’ ಜೂ.23 ರಂದು ಸರ್ಕಾರಿ ‘ಶಾಲೆಗಳಿಗೆ ಕತ್ತಲೆ ಭಾಗ್ಯ’ ಹೆಸರಿನಲ್ಲಿ ಬರೆದ ವಿಶೇಷ ವರದಿಯನ್ನು ಉಲ್ಲೇಖಿಸಿ ಸೂಚನೆ ನೀಡಿರುವ ಶಾಲಾ ಶಿಕ್ಷಣ ಇಲಾಖೆ, ವಿದ್ಯುತ್ ಬಿಲ್ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸಬೇಕು ಹಾಗೂ ಇಂತಹ ಪ್ರಕರಣಗಳ ಬಗ್ಗೆ ಜಿಲ್ಲಾ ಹಂತದಲ್ಲಿಯೇ ಕೂಡಲೇ ಕ್ರಮ ಕೈಗೊಂಡು ವಿದ್ಯುತ್ ಸರಬರಾಜು ನಿಗಮಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶನ ನೀಡಿದೆ.