ನ್ಯೂಸ್

ಸಕಾಲಕ್ಕೆ ಸಿಗದ ಸಿಂಧುತ್ವ, ಸರ್ಕಾರಿ ನೌಕರರು ಅತಂತ್ರ: ಜಾರಿ ನಿರ್ದೇಶನಾಲಯ ವರದಿ ಕಡ್ಡಾಯ ಸೃಷ್ಟಿಸಿದ ಗೊಂದಲ

Webdesk - Ravikanth

| ರೇವಣಸಿದ್ದಪ್ಪ ಪಾಟೀಲ್ ಬೀದರ್

ಸಿಂಧುತ್ವ ಪ್ರಮಾಣಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತಿ ಕೋಶ) ವರದಿ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಘಾತ ನೀಡಿದೆ. ಸಕಾಲಕ್ಕೆ ಪ್ರಮಾಣಪತ್ರ ಸಿಗದೆ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರಚಿಂಚೋಳಿ ಗ್ರಾಮದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಚಾಲಕ ಕಮ್ ನಿರ್ವಾಹಕ ಓಂಕಾರ ಶೇರಿಕಾರ (42) ಪ್ರಕರಣ ಇದೀಗ ಸಮುದಾಯದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಸುಳ್ಳು ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಇರಿಸಿರುವ ಈ ಹೆಜ್ಜೆ ಗೊಂದಲ ಸೃಷ್ಟಿಸಿದೆ.

ಈ ಮೊದಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿದ್ದ ಜಾತಿ ಪರಿಶೀಲನಾ ಸಮಿತಿ ಮೂಲಕ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗುತ್ತಿತ್ತು. ಆದರೆ 2021ರ ಜನವರಿ 16ರಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿ, ಎಸ್ಸಿ, ಎಸ್ಟಿಗೆ ಸೇರಿದ ಅಭ್ಯರ್ಥಿಗಳು ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳಲ್ಲಿ ನೌಕರಿಗಾಗಿ ಆಯ್ಕೆಯಾಗಿ ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯುವ ಪ್ರಕರಣಗಳಲ್ಲಿ ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಮೊದಲು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವರದಿ ಪಡೆದು ಪ್ರಮಾಣಪತ್ರ ಕೊಡಲು ಸ್ಪಷ್ಟವಾಗಿ ತಿಳಿಸಲಾಗಿದೆ. ಪರಿಶಿಷ್ಟ ಪಂಗಡದ 50 ಜಾತಿಗಳ ಪೈಕಿ ಕೇವಲ ಗೊಂಡ, ಜೇನು ಕುರುಬ, ಕಾಡು ಕುರುಬ, ರಾಜಗೊಂಡ, ಪರಿವಾರ, ತಳವಾರ, ಕೋಳಿ ಢೋರ್, ಟೋಕರಿ ಕೋಳಿ, ನಾಯ್್ಕೊಡ, ಮಲೇರು, ಕಮ್ಮಾರ ಮುಂತಾದವು ಹಾಗೂ ಪರಿಶಿಷ್ಟ ಜಾತಿಗಳ 101 ಪೈಕಿ ಬೇಡ ಜಂಗಮ, ಬುಡಗಾ ಜಂಗಮ, ಭೋವಿ, ಚನ್ನದಾಸರ, ಹಂಡಿಜೋಗಿಸ್, ಕೊಟೇಗಾರ, ಮೇತ್ರಿ, ಮೋಗೆರ್ ಇತರೆ ಜಾತಿಗಳಿಗೆ ಮಾತ್ರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವರದಿ ಕಡ್ಡಾಯಗೊಳಿಸಲಾಗಿದೆ. ಜಾರಿ ನಿರ್ದೇಶನಾಲಯ ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ತನ್ನ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ. ಆದರೆ 6 ರಿಂದ 8 ತಿಂಗಳಾದರೂ ವರದಿ ನೀಡದ ಕಾರಣ ಹಲವು ಅಭ್ಯರ್ಥಿಗಳು ಪರದಾಡಬೇಕಾಗಿದೆ.

ಸಕಾಲದಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡದ ಕಾರಣ ಸಾರಿಗೆ ನೌಕರ ಓಂಕಾರ ಆತ್ಮಹತ್ಯೆ ಮಾಡಿಕೊಂಡ ವಿಷಯ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿರುವೆ. ಮೃತನ ಪರಿವಾರಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು. ಇಂಥ ಘಟನೆ ಮರುಕಳಿಸದಂತೆ ಅವೈಜ್ಞಾನಿಕ ಆದೇಶ ವಾಪಸ್ ಪಡೆದು ಸಕಾಲಕ್ಕೆ ಸಿಂಧುತ್ವ ಪ್ರಮಾಣಪತ್ರ ಕೊಡುವಂತೆ ಒತ್ತಾಯಿಸಿದ್ದೇನೆ. ಬೆಳಗಾವಿ ಅಧಿವೇಶನ ವೇಳೆ ಈ ವಿಷಯ ಸಿಎಂ ಗಮನಕ್ಕೆ ತರಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ್ದಲ್ಲಿ ಅಮಾಯಕನ ಜೀವ ಉಳಿಸಬಹುದಾಗಿತ್ತು. | ರಾಜಶೇಖರ ಪಾಟೀಲ್ ಹುಮನಾಬಾದ್ ಶಾಸಕ

ಆತ್ಮಹತ್ಯೆಯ ಸುತ್ತ: ಸಿಂಧುತ್ವ ಪ್ರಮಾಣಪತ್ರ ಸಿಗದೆ ಮನನೊಂದು ಸಾರಿಗೆ ನೌಕರ ಓಂಕಾರ ನೇಣು ಹಾಕಿಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡ ವಿಷಯ ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಮಾರ್ದನಿಸಿದೆ. ಭಾಲ್ಕಿ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓಂಕಾರಗೆ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸುವಂತೆ ಅಧಿಕಾರಿಗಳು ಪದೇಪದೆ ಹೇಳುತ್ತಿದ್ದರು. ಪ್ರಮಾಣಪತ್ರಕ್ಕಾಗಿ ಅಲೆದಾಡಿದರೂ ಸಕಾಲಕ್ಕೆ ನೀಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ವಿಜಯಕುಮಾರ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಇವರ ಜೀವ ಪಡೆದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.

ಕುಟುಂಬಕ್ಕೆ ಪರಿಹಾರದ ಭರವಸೆ: ಓಂಕಾರ್ ಶೇರಿಕರ್ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಚರ್ಚೆಗೊಳಗಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್​ನ ರಾಜಶೇಖರ ಪಾಟೀಲ್, ಈಶ್ವರ ಖಂಡ್ರೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೀಸಲಾತಿ ಅಡಿ ಬರುವ ಗೊಂಡ, ಕೋಲಿ, ಟೋಕ್ರೆ ಸಮಾಜದ ಜನರಿಗೂ ಮೀಸಲಾತಿ ಪತ್ರ ಸಿಗಬೇಕು. ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ಬದಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಕೊಡುವ ತೀರ್ಮಾನ ಸಮಂಜಸವಾಗಿಲ್ಲ ಎಂದು ಕಾಣಿಸುತ್ತಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಜತೆ ಚರ್ಚೆ ಮಾಡುತ್ತೇವೆ ಎಂದರು. ಶೇರಿಕರ್ ಕುಟುಂಬಕ್ಕೆ ಪರಿಹಾರ ಕೊಡ ಬೇಕು, ಅನುಕಂಪದ ಆಧಾರದ ಮೇಲೆ ಕುಟುಂಬಕ್ಕೊಂದು ಉದ್ಯೋಗ ನೀಡಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸಮಾಜ ಕಲ್ಯಾಣ ಅಧಿಕಾರಿ ವಿರುದ್ಧ ಪ್ರಕರಣ: ಎಸ್​ಟಿ ಗೊಂಡ ಸಿಂಧುತ್ವ ಪ್ರಮಾಣಪತ್ರ ದೊರೆಯದ ಹಿನ್ನೆಲೆಯಲ್ಲಿ ಮನನೊಂದು ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡ ಸಂಬಂಧ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾಜ ಕಲ್ಯಾಣ ಅಧಿಕಾರಿ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಓಂಕಾರ ಪತ್ನಿ ಲಕ್ಷಿ್ಮೕಬಾಯಿ ಶೇರಿಕಾರ ನೀಡಿದ ದೂರಿನನ್ವಯ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.