ನ್ಯೂಸ್

ಪಾರ್ಟಿಗಳಿಗೆ ಪೂರೈಸಲು ಸರಬರಾಜು ಆಗುತ್ತಿದ್ದ ಗಾಂಜಾ ಜಪ್ತಿ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಾರ್ಟಿಗಳಿಗೆ ಪೂರೈಸಲು ಹೊರ ರಾಜ್ಯಗಳಿಂದ ಸರಬರಾಜು ಆಗುತ್ತಿದ್ದ ೩.೨೫ ಕೋಟಿ ರೂ. ಮೌಲ್ಯದ ೩೧೮ ಕೆ.ಜಿ. ಗಾಂಜಾವನ್ನು ಗೋವಿಂದಪುರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಕೇರಳ ಮೂಲದ ಅಚ್ಚು ಸಂತೋಷ್, ಬೆಂಗಳೂರಿನ ಜಮೀರ್ ಖಾನ್ ಮತ್ತು ಆತನ ಪತ್ನಿ ರೇಷ್ಮಾನನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಅಚ್ಚು ಸಂತೋಷ್ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಪೂರೈಕೆ, ದರೋಡೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಗೂಂಡಾ ಕಾಯಿದೆಯಡಿ ಮೂರು ಬಾರಿ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆತ ಇಲ್ಲಿ ಕಾರು ಚಾಲಕ ಜಮೀರ್ ಖಾನ್‌ನನ್ನು ಪರಿಚಯಿಸಿಕೊಂಡಿದ್ದ. ನಂತರ ಜಮೀರ್ ಮತ್ತು ಆತನ ಪತ್ನಿಯನ್ನು ಪುಸಲಾಯಿಸಿ ಗಾಂಜಾ ಮಾರಾಟ ಕೃತ್ಯಕ್ಕೆ ಬಳಸಿಕೊಂಡಿದ್ದ. ಈ ಮೂವರೂ ಆಂಧ್ರಪ್ರದೇಶ, ಒಡಿಶಾದ ಗಡಿ ಭಾಗಗಳಿಗೆ ತೆರಳಿ ಗಾಂಜಾ ಖರೀದಿಸಿ ನಗರಕ್ಕೆ ತಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾವೆಲ್ಸ್ ಏಜೆನ್ಸಿ ಇಟ್ಟುಕೊಂಡಿರುವ ಜಮೀರ್ ಖಾನ್, ಪ್ರವಾಸಿಗರನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಆತನಿಗೆ ಅಚ್ಚು ಸಂತೋಷ್‌ನ ಪರಿಚಯವಾಗಿತ್ತು. ಆಂಧ್ರಪ್ರದೇಶ, ಒಡಿಶಾದ ಗಡಿ ಭಾಗದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ಆರೋಪಿಗಳು ಕಾರಿನಲ್ಲಿ ನಗರಕ್ಕೆ ಸಾಗಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡುವ ಯತ್ನದಲ್ಲಿ ಆರೋಪಿಗಳು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ನೈಜಿರಿಯಾ ಪ್ರಜೆಗಳ ಬಂಧನ:

ಶಿಕ್ಷಣದ ಉದ್ದೇಶಕ್ಕೆ ವೀಸಾ ಪಡೆದು ಭಾರತಕ್ಕೆ ಬಂದು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ನೈಜಿರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡೇವಿಡ್ ಮತ್ತು ಕೋಫಿ ಬಂಧಿತರು. ಆರೋಪಿಗಳು ಶೈಕ್ಷಣಿಕ ವೀಸಾದಡಿ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಹೆಸರಘಟ್ಟ ಬಳಿಯ ಪುಟ್ಟಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೋಜಿನ ಜೀವನಕ್ಕಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಮುಂಬೈ, ದೆಹಲಿಯಲ್ಲಿರುವ ಆಫ್ರಿಕಾ ಮೂಲದ ಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಕ್ರಿಸ್ಟಲ್, ಎಕ್ಸೆಟೆಸಿ ಪಿಲ್ಸ್ ಮತ್ತು ಕೊಕೇನ್ ಖರೀದಿಸಿಕೊಂಡು ಬಂದು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.