ಶಿವಮೊಗ್ಗ: ಆಟದೊಂದಿಗೆ ನಲಿಯುತ್ತ ಕಲಿಯುವುದೇ ಜೀವನ ಶಿಕ್ಷಣ. ವಿದ್ಯಾಭ್ಯಾಸದೊಂದಿಗೆ ಸ್ಕೌಟ್ಸ್-ಗೈಡ್ಸ್‌ನಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ಗೈಡ್ ಜಿಲ್ಲಾ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ನಿಪುಣ್ ಪರೀಕ್ಷಾ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಬದುಕುವ ಕಲೆ ಜತೆಗೆ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಎಂದರೆ ಶಿಸ್ತಿನ ಸಿಪಾಯಿಗಳ ತಂಡ. ಕರೊನಾ ಸಮಯದಲ್ಲಿ ರೋವರ್ ತಂಡಗಳು ಆಹಾರ, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಶಿವಮೊಗ್ಗ, ಭದ್ರಾವತಿ ವ್ಯಾಪ್ತಿಯಲ್ಲಿ ತಲುಪಿಸಿದ್ದನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.
ಸ್ಥಾನಿಕ ಆಯುಕ್ತ ಕೆ.ರವಿ ಮಾತನಾಡಿ, ರೋವರ್ ರೇಂಜರ್‌ಗಳು ತಮ್ಮ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಗಿಡ ನೆಡುವ ಚಟುವಟಿಕೆ ಪ್ರಾರಂಭಿಸಬೇಕು ಎಂದರು.
ಜಿಲ್ಲೆಯ ವಿವಿಧ ತಾಲೂಕುಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಎಚ್.ಪರಮೇಶ್ವರ್, ಖಜಾಂಚಿ ಚೂಡಾಮಣಿ ಪವಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ತರಬೇತಿ ತಂಡದ ನಾಯಕ ರಾಜೇಶ್ ವಿ. ಅವಲಕ್ಕಿ, ನಾಯಕಿ ಕಾತ್ಯಾಯಿನಿ ಇತರರಿದ್ದರು.