ವಿಜಯಪುರ: ಕರ್ನಾಟಕ ಲೋಕ ಸೇವಾ ಆಯೋಗ ಅಧಿಸೂಚಿಸಿರುವ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಮಂಗಳವಾರ ಸುಸೂತ್ರವಾಗಿ ಪೂರ್ವಭಾವಿ ಪರೀಕ್ಷೆ ನಡೆಯಿತು.
ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್, ವಿದ್ಯಾನಿಕೇತನ ಪಪೂ ಕಾಲೇಜ್, ಬಿಡಿಇ ಬಾಲಕಿಯರ ಪ್ರೌಢಶಾಲೆ, ಪಿಡಿಜೆ ಪ್ರೌಢಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ವಿ.ಬಿ. ದರಬಾರ ಪಪೂ ಕಾಲೇಜ್ ಹಾಗೂ ಅಂಜುಮನ್ ಕಲಾ, ವಾಣಿಜ್ಯ ಮಹಾವಿದ್ಯಾಲಯ ಸೇರಿದಂತೆ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದವು.
ಒಟ್ಟು 4007 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಪತ್ರಿಕೆ-1ಕ್ಕೆ 2928 ಹಾಗೂ ಪತ್ರಿಕೆ-2ಕ್ಕೆ 2914 ಅಭ್ಯರ್ಥಿಗಳು ಹಾಜರಾಗಿ, ಪತ್ರಿಕೆ-1ಕ್ಕೆ 1079 ಹಾಗೂ ಪತ್ರಿಕೆ-2ಕ್ಕೆ 1093 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷೆಗಳು ಅತ್ಯಂತ ಸುಗಮ ಹಾಗೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಿಸಿದವರಿಗೆ ಅವರು ಸೂಚನೆ ನೀಡಿದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್, ಅಂಜುಮನ್ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್, ಬಿಡಿಇ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಆರಂಭದಲ್ಲಿಯೇ ಎಲ್ಲ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವ ಕುರಿತು ದೃಢಪಡಿಸಿಕೊಂಡರು. ವಿವಿಧ ಅಧಿಕಾರಿಗಳು ಇದ್ದರು.