ನ್ಯೂಸ್

ಮರು ಪರೀಕ್ಷೆ ನಡೆಸಿ, ಇಲ್ಲವಾದಲ್ಲಿ ಮುಖ್ಯ ಪರೀಕ್ಷೆಗೆ ನೇಮಿಸಿ: ಕೆಪಿಎಸ್‌ಸಿಗೆ ಅಭ್ಯರ್ಥಿಗಳ ಆಗ್ರಹ

ಬೆಂಗಳೂರು: ಕನ್ನಡ ಭಾಷಾಂತರದಿಂದ ಕನ್ನಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವ ಕಾರಣ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಬೇಕು. ಇಲ್ಲವಾದಲ್ಲಿ ಪರೀಕ್ಷೆಗೆ ಹಾಜರಾಗಿರುವ ಎಲ್ಲರಿಗೂ ಮುಖ್ಯ ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ನೂರಾರು ಆಕಾಂಕ್ಷಿಗಳು ಹೋರಾಟ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಹೋರಾಟಗಾರರು, ಕೆಪಿಎಸ್ಸಿ ಪ್ರತಿ ಬಾರಿ ಇದೇ ರೀತಿ ಉದ್ಧಟತನ ತೋರುತ್ತಿದೆ. ಆದ್ದರಿಂದ ಮೊದಲು ಕನ್ನಡ ಅವಾಂತರಗಳಿಗೆ ಉತ್ತರ ನೀಡಬೇಕು ಬಳಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿವೆ ಎಂಬ ಆಗ್ರಹ ಮಾಡಿದರು.

ಹೋರಾಟಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು, ರಾಜ್ಯ ರೈತ ಸಂಘದ (ಹಸಿರು ಸೇನೆ) ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಹಲವು ಸಂಘಟನೆಗಳು ಸಾಥ್ ನೀಡಿದವು.

ಹುದ್ದೆ ಆಕಾಂಕ್ಷಿಗಳ ತಪಸ್ಸಿಗೆ ಕೆಪಿಎಸ್ಸಿ ಬೆಂಕಿ:

ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಕೆಪಿಎಸ್ಸಿಯು ರಾಜ್ಯದ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಭವಿಷ್ಯ ರೂಪಿಸಬೇಕಿತ್ತು. ಆದರೆ, ಪ್ರತಿ ಬಾರಿ ಪರೀಕ್ಷೆ ನಡೆಸುವಲ್ಲಿ ವಿಳಂಬ, ಅಧಿಸೂಚನೆ, ಪರೀಕ್ಷೆ, ಲಿತಾಂಶ ಪ್ರಕಟಿಸುವುದು ವಿಳಂಬ ಸೇರಿ ಪ್ರತಿ ಹಂತದಲ್ಲಿ ನಿಧಾನಗತಿ ಅನುಸರಿಸುತ್ತಿರುವ ಕಾರಣ, ಸರ್ಕಾರಿ ಹುದ್ದೆ ಪಡೆಯಬೇಕೆಂಬ ಗುರಿಯಿಂದ ತಪಸ್ಸಿನಂತೆ ಓದುವ ರಾಜ್ಯದ ಯುವಕರ ತಪಸ್ಸಿಗೆ ಬೆಂಕಿ ಇಡುವ ಕೆಲಸವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ನಮ್ಮ ಸರ್ಕಾರವಿದ್ದಗಲೂ ಕೆಪಿಎಸ್ಸಿ ಅವಾಂತರಗಳಾಗಿವೆ. ಭಾಷಾ ಲೋಪ, ಭಾಷಾಂತರ ಲೋಪ ಆಗಿದೆ. ಆದ್ದರಿಂದ ಮಾಧ್ಯಮಗಳಲ್ಲಿ ನಾಳೆ ಸುದ್ದಿ ಪ್ರಕಟವಾದ ತಕ್ಷಣಕ್ಕೆ ನ್ಯಾಯ ದೊರೆಯುವುದಿಲ್ಲ. ನ್ಯಾಯ ಸಿಗುವ ತನಕ, ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುವ ತನಕ, ಮಾನವೀಯತೆಯಿಂದ ವರ್ತಿಸುವ ತನಕ ಹೋರಾಟ ನಿಲ್ಲಬಾರದು. ನಿಮ್ಮ ಹೋರಾಟಕ್ಕೆ ಬಿಜೆಪಿ ಎಂದಿಗೂ ಜತೆಯಲ್ಲಿರಲಿದೆ ಎಂಬ ಭರವಸೆ ನೀಡಿದರು.

ಅಜ್ಞಾನೇಂದ್ರನ ಬದಲಿಸಿ:

ಆಗಸ್ಟ್‌ನಲ್ಲಿ ನಡೆದ ಕೆಎಎಸ್ ಪೂವಭಾಗಿ ಪರೀಕ್ಷೆಯಲ್ಲಿ 57 ಪ್ರಶ್ನೆಗಳು, ಡಿಸೆಂಬರ್‌ನಲ್ಲಿ ನಡೆದ ಮರು ಪರೀಕ್ಷೆಯಲ್ಲಿ 36 ಪ್ರಶ್ನೆಗಳು ತಪ್ಪಾಗಳಾಗಿವೆ. ಇದಕ್ಕೆಲ್ಲ ಪರೀಕ್ಷಾ ನಿಯಂತ್ರಕನಾಗಿ ಕಾರ್ಯನಿರ್ವಹಿಸುತ್ತಿರುವ ಜ್ಞಾನೇಂದ್ರಕುಮಾರ್ ಕಾರಣವಾಗಿದ್ದಾರೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪರೀಕ್ಷಾ ನಿಯಂತ್ರಕ ಜ್ಣಾನವಿಲ್ಲದ ಕಾರಣ ಸರಿಯಾದ ಜ್ಣಾನ ಇರುವವರನ್ನು ನೇಮಿಸುವಂತೆ ಒತ್ತಾಯಿಸಿದರು.

ಕನ್ನಡದಲ್ಲಿ ಮೊದಲು ಪ್ರಶ್ನೆಪತ್ರಿಕೆ ಸಿದ್ಧಪಡಿಸಿ. ಅದನ್ನು ಗೂಗಲ್ ಮಾಡಿ ಇಂಗ್ಲಿಷ್ ಮಾಡಿಕೊಳ್ಳಿ. ಆದರೆ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಬೇಡಿ. ಪರೀಕ್ಷೆಯಲ್ಲಿ ಕೇವಲ ಒಂದು ಅಂಕ ಕಡಿಮೆಯಾದರೂ ನೂರಾರು ರ‌್ಯಾಂಕ್ ಹಿಂದೆ ಹೋಗ್ತಾರೆ ಎಂದರು.

ಕನ್ನಡದ ಕೊಲೆ ಮಾಡುವುದನ್ನು ಮತ್ತು ಸಮಜಾಯಿಷಿ ನೀಡುವುದನ್ನು ಮೊದಲು ನಿಲ್ಲಿಸಬೇಕು. ತಪ್ಪು ಎಲ್ಲರೂ ಮಾಡುತ್ತಾರೆ, ಅದನ್ನು ತಿದ್ದಿಕೊಳ್ಳುವ ಕೆಲಸ ಮಾಡಬೇಕು. ಪದೇ ಪದೇ ಪುನರಾವರ್ತನೆಯಾಗುತ್ತಿದ್ದರೆ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆ ನೀಡಿದರು.

ಹೋರಾಟದಲ್ಲಿ ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್, ಹೋರಾಟಗಾರರಾದ ಮಾರಸಂದ್ರ ಮುನಿಯಪ್ಪ, ಕರ್ನಾಟಕ ರಾಜ್ಯ ವಿದ್ಯಾರ್ಥಿಸಂಘಟನೆಯ ಕಾಂತರಾಜು ಸೇರಿ ಹಲವು ಭಾಗವಹಿಸಿದ್ದರು.

ಅಧಿಕಾರಿಗಳನ್ನು ಅಮಾನತು ಮಾಡಿ

ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಕೆಪಿಎಸ್ಸಿ ಆಯೋಗದ ಪರೀಕ್ಷ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗವಾಲ್ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಅಗ್ರಹಿಸಿದರು.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು, ಕೆಪಿಎಸ್ಸಿ ಆಯೋಗವನ್ನು ಆಮೂಲಾಗ್ರ ಸುಧಾರಣೆ ಮಾಡಬೇಕು, ಬ್ಯಾಂಕ್, ರೈಲ್ವೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.

ಅನುವಾದ ಬಾರದ ಮೂರ್ಖ ಶಿಖಾಮಣಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಕೆಪಿಎಸ್ಸಿ ಬಿಡದಿದ್ದರೆ, 2010ರ ರೀತಿಯಲ್ಲಿ ಹೋರಾಟಕ್ಕೆ ಮತ್ತೆ ಮುಂದಾಗಬೇಕಾಗುತ್ತದೆ. ಕೆಪಿಎಸ್ಸಿ ಅಧಿಕಾರಿಗಳ ಅತ್ತೆ ಮನೆನೂ ಅಲ್ಲ, ಸರ್ವಾಧಿಕಾರಿ ಕಚೇರಿಯೂ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. - ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ