ಮುಂಬೈ: ಜಾಗತಿಕ ಸಾಂಕ್ರಾಮಿಕವಾದ ಕರೊನಾ ವೈರಸ್ ಜನರಲ್ಲಿ ತೀವ್ರ ಭಯ ಹುಟ್ಟಿಸಿದೆ. ಭಾರತದಲ್ಲಿ ಬಹುತೇಕ ರಾಜ್ಯಗಳು ಲಾಕ್ಡೌನ್ ಆಗಿದೆ. ಅದೆಷ್ಟೋ ಮಂದಿ ವರ್ಕ್ ಫ್ರಾಮ್ ಹೋಂನಲ್ಲಿ ತೊಡಗಿಸಿಕೊಂಡಿದ್ದಾರೆ.
ಹಾಗೇ, ಕರೊನಾ ವೈರಸ್ ಬಹುಬೇಗನೇ ಹರಡಬಹುದಾದ ಜಿಮ್, ಪಾರ್ಕ್, ಥಿಯೇಟರ್ಗಳೆಲ್ಲ ಬಂದ್ ಆಗಿವೆ. ಮಾ.31ರವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ದಿನವಿಡೀ ಕೆಲಸ, ಅದೂಇದು ಮನರಂಜನೆ, ಪಾರ್ಟಿ ಎಂದುಕೊಂಡು ಮನೆಯಿಂದ ಹೊರಗೇ ಇರುತ್ತಿದ್ದ ಜನರೆಲ್ಲ ಈಗೀಗ ಇಡೀದಿನ ಮನೆಯಲ್ಲೇ ಇರುವ ಪರಿಸ್ಥಿತಿ ಬಂದಿದೆ. ಹಾಗಾಗಿ ಜನರು ಹೆಚ್ಚುಚ್ಚು ಆಹಾರ, ತಿನಿಸು, ಸ್ಯಾನಿಟೈಸರ್ನಂತಹ ಸ್ವಚ್ಛತಾ ವಸ್ತುಗಳು ಸೇರಿ ಅಗತ್ಯವಾಗಿರುವುದನ್ನೆಲ್ಲ ಶೇಖರಣೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಒಂದು ವಿಚಿತ್ರ ಬೆಳವಣಿಗೆಯಾಗಿದೆ.
ಭಾರತದಲ್ಲಿ ಈ ಸಮಯದಲ್ಲಿ ಕಾಂಡೋಮ್ಗಳ ಮಾರಾಟ ಅಧಿಕವಾಗಿದೆ. ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟ ಶೇ.25 ರಿಂದ ಶೇ.50ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಹಲವು ಮೆಡಿಕಲ್ ಶಾಪ್ಗಳ ಮಾಲೀಕರೇ ತಿಳಿಸಿದ್ದಾರೆ.
ಜನರು ಈಗ ಮನೆಯಲ್ಲೇ ಇರುತ್ತಾರೆ. ಹೆಚ್ಚು ಸಮಯ ಕೂಡ ಇದೆ. ಅವರಿಗೆ ಬೋರ್ ಬರುತ್ತಿದೆ. ಕಾಂಡೋಮ್ ಮಾರಾಟ ಹೆಚ್ಚಾಗಲೂ ಇದೇ ಕಾರಣ ಎಂದು ದಕ್ಷಿಣ ಮುಂಬೈನ ಔಷಧಿ ಅಂಗಡಿ ಮಾಲೀಕ ಹರ್ಷಲ್ ಶಾ ಹೇಳಿದ್ದಾರೆ. ಹಾಗೇ, ಸಾಮಾನ್ಯ ದಿನಗಳಲ್ಲಿ ಜನರು ಸಾಮಾನ್ಯವಾಗಿ ಮೂರು ಕಾಂಡೋಮ್ಗಳಿರುವ ಚಿಕ್ಕ ಪ್ಯಾಕೆಟ್ ಕೊಂಡುಕೊಳ್ಳುತ್ತಾರೆ. ಆದರೆ ಈಗ 10ರಿಂದ20 ಕಾಂಡೋಮ್ಗಳಿರುವ ದೊಡ್ಡ ಪ್ಯಾಕೆಟ್ಗೆ ಆದ್ಯತೆ ನೀಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
ಇದು ನಿಜಕ್ಕೂ ಫನ್ನಿಯಾಗಿದೆ. ಜನರು ಸಾಮಾನ್ಯವಾಗಿ ನ್ಯೂ ಇಯರ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಕಾಂಡೋಮ್ನ್ನೂ ಹೆಚ್ಚಾಗಿ ಖರೀದಿಸುತ್ತಾರೆ. ಆದರೆ ಕರೊನಾ ಭೀತಿ ಎದುರಾಗಿ ಲಾಕ್ಡೌನ್ ಆದ ಸಂದರ್ಭದಲ್ಲಿ ಉಳಿದ ಅಗತ್ಯ ವಸ್ತುಗಳು, ಔಷಧಿಗಳ ಜತೆ ಕಾಂಡೋಮ್ ಕೂಡ ಮಾರಾಟವಾಗುತ್ತಿದೆ. ನಮ್ಮ ಅಂಗಡಿಯಲ್ಲಿ ಕಾಂಡೋಮ್ ಸ್ಟಾಕ್ನ್ನು ಶೇ.25ರಷ್ಟು ಹೆಚ್ಚಿಸಿಕೊಂಡಿದ್ದೇನೆ ಎಂದು ಇನ್ನೋರ್ವ ಮೆಡಿಕಲ್ ಶಾಪ್ ಮಾಲೀಕರು ತಿಳಿಸಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಪರಿಸ್ಥಿತಿ ಇರುವ ಕಳೆದ ಒಂದು ವಾರದಲ್ಲಿ ಗರ್ಭನಿರೋಧಕ ಮಾತ್ರೆಗಳು ಮತ್ತು ಕಾಂಡೋಮ್ಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಔಷಧಿ ಅಂಗಡಿಗಳಿಗೆ ಆಗಮಿಸಿ ಕಾಂಡೋಮ್ ಕೊಳ್ಳುತ್ತಿದ್ದಾರೆ. ಇದೊಂದು ಅನಿರೀಕ್ಷಿತ ಬೆಳವಣಿಗೆ ಎಂದು ಹೇಳಲಾಗಿದೆ. (ಏಜೆನ್ಸೀಸ್)