ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಯವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು. 
ನ್ಯೂಸ್

ಪ್ರೊ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ಪತ್ರಕರ್ತರಿಂದ ಸಂತಾಪ ಸೂಚಕ ಸಭೆ

ಮಂಗಳೂರು: ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಯವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದವರು, ಜೊತೆಗೆ ಸಂಘಟನೆಗೂ ಒತ್ತು ನೀಡಿದವರು ಎಂದು ಅವರ ಜೊತೆಗಿನ ಅನುಭವ ಹಂಚಿಕೊಂಡು ನುಡಿನಮನ ಸಲ್ಲಿಸಿದರು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿ ಯವರು ಸರಳ ಸಜ್ಜನಿಕೆಯ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಪತ್ರಿಕೋದ್ಯಮದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕರ್ತವ್ಯ ನಿಷ್ಠೆ ಯಿಂದ ಸಾಕಷ್ಟು ಶಿಷ್ಯರನ್ನು ಪಡೆದುಕೊಂಡಿದ್ದಾರೆ.ಸಂಖ್ಯೆಯಲ್ಲಿ ಒಂದು ಸಣ್ಣ ಸಮುದಾಯದ ಮೂಲಕ ಸಮಾಜ ಗುರುತಿಸುವಂತಹ ಸಾಧನೆಯನ್ನು ತಮ್ಮ ಸ್ವ ಪ್ರಯತ್ನದ ಮೂಲಕ ಮಾಡಿದವರು ಎಂದರು.
ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಯಶವಂತ ಬೋಳೂರು, ಪ್ರಮುಖರಾದ ನಂದ ಗೋಪಾಲ್, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪತ್ರಕರ್ತ ನಿವಾಸ ನಾಯಕ್ ಇಂದಾಜೆ, ಹಾಗೂ ಬಾಲಕೃಷ್ಣ ಗಟ್ಟಿಯವರ ಒಡನಾಡಿಗಳಾಗಿದ್ದ, ಡೊನಾಲ್ಡ್ ಪಿರೇರಾ,ಬಶೀರ್, ಪತ್ರಕರ್ತ ಭಾಸ್ಕರ ರೈ ಕಟ್ಟ ನುಡಿ ನಮನ ಸಲ್ಲಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ರಾಜೇಶ್ ಕೆ ಪೂಜಾರಿ, ಉಪಾಧ್ಯಕ್ಷ ಆರಿಫ್ ಪಡುಬಿದ್ರೆ, ಕೋಶಾಧಿಕಾರಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸುರೇಶ್ ಡಿ ಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಕುಮಾರ್, ಮಂಗಳೂರು ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಬಾಲಕೃಷ್ಣ ಗಟ್ಟಿಯವರ ಪುತ್ರ ಸುಕುಮಾರ ಗಟ್ಟಿ, ಅಳಿಯ ಯಶವಂತ ಗಟ್ಟಿ ಕುಟುಂಬದ ಸದಸ್ಯರಾದ ಪದ್ಮನಾಭ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.