ಶಾಂತವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕತಾವಾದ ಬಹುತೇಕ ಕೊನೆಗೊಂಡು, ಉಗ್ರರ ವಿರುದ್ಧ ಕಠಿಣ ಕ್ರಮದಿಂದಾಗಿ ಭಯೋತ್ಪಾದಕ ದಾಳಿಗಳು ತಗ್ಗಿದ್ದವು. ಆದರೆ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿತಾಣ ಪಹಲ್ಗಾಮ್ಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಭಯೋತ್ಪಾದಕರ ಕ್ರೌರ್ಯ ಹಾಗೂ ಹೇಡಿತನಕ್ಕೆ ಸಾಕ್ಷಿಯಾಗಿದೆ.
ಇದು ಬೇಸಿಗೆಯ ಸಮಯವಾಗಿರುವುದರಿಂದ ಕಣಿವೆ ಪ್ರದೇಶಕ್ಕೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಪವಿತ್ರ ಅಮರನಾಥ್ ಯಾತ್ರೆಯ ಸಿದ್ಧತೆಯೂ ನಡೆದಿದೆ. ಇಂಥ ಸಂದರ್ಭದಲ್ಲಿ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ನಷ್ಟ ಭರಿಸಲಾಗದಂಥದ್ದು. ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಸಮಾಜದ ಕರ್ತವ್ಯವೂ ಹೌದು. ಗೃಹ ಸಚಿವ ಅಮಿತ್ ಷಾ ಕಾಶ್ಮೀರಕ್ಕೆ ದೌಡಾಯಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಷಾ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಪ್ರವಾಸೋದ್ಯಮ ಇತ್ತೀಚೆಗಷ್ಟೇ ಮತ್ತೆ ಚಿಗುರತೊಡಗಿತ್ತು.
ದೇಶದ ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರು ಇಲ್ಲಿ ಆಗಮಿಸಿ ಕಣಿವೆ ಪ್ರದೇಶದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದರು. ಇದರಿಂದ ಸ್ಥಳೀಯ ಆರ್ಥಿಕತೆ ಕೂಡ ಚೇತರಿಕೆ ಕಂಡುಕೊಂಡಿದೆ. ಆದರೆ, ಈ ಶಾಂತಿ ಮತ್ತು ಅಭಿವೃದ್ಧಿಯ ಪಯಣಕ್ಕೆ ಅಡ್ಡಿ ಮಾಡಲು ಉಗ್ರರು ಹವಣಿಸುತ್ತಲೇ ಇದ್ದಾರೆ. ಭಾರತ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವಾಗ ಈ ಘಟನೆ ನಡೆದಿರುವುದು ನೋವಿನ ಸಂಗತಿ. ಆದರೆ, ಇದನ್ನು ಹಿನ್ನಡೆ ಎಂದು ಭಾವಿಸದೆ ಭಯೋತ್ಪಾದನೆಯ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಅಂತಾರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸದ ಸಂಗತಿ.
ಈ ಬಗ್ಗೆ ಭಾರತ ಪದೇಪದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದನಿ ಎತ್ತಿದೆ ಮತ್ತು ಭಯೋತ್ಪಾದನೆಯ ವಿರುದ್ಧ ಸಂಘಟಿತ ಹೋರಾಟದ ಅಗತ್ಯವನ್ನು ಪ್ರತಿಪಾದಿಸಿದೆ. ಈ ಹಿಂದೆ ಪಾಕ್ನ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಮ್ಮ ಸೇನೆ ನಾಶಗೊಳಿಸಿದರೂ ಆ ಧೂರ್ತ ರಾಷ್ಟ್ರ ಇನ್ನೂ ಪಾಠ ಕಲಿತಿಲ್ಲ. ಆದ್ದರಿಂದ ಕಾಶ್ಮೀರದಲ್ಲಿನ ಶಾಂತಿಗೆ ಭಂಗ ತರುವ ಪ್ರಯತ್ನಗಳನ್ನು ಇನ್ನೂ ಪರಿಣಾಮಕಾರಿಯಾಗಿ ಹಿಮ್ಮೆಟಿಸಬೇಕಿದೆ. ಸ್ಥಳೀಯವಾಗಿ ಉಗ್ರಜಾಲಗಳಿಗೆ ಬೆಂಬಲ ನೀಡುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಅಗತ್ಯ.