ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹನೂರಿನಲ್ಲಿ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿದರು. ಅಮ್ಜಾದ್‌ಖಾನ್, ಪೂಂಗುಡಿ, ವೆಂಕಟಾಚಲ ಇತರರು ಇದ್ದರು.  
ನ್ಯೂಸ್

ಅರಣ್ಯ ಇಲಾಖೆ ಕಾರ್ಯವೈಖರಿಗೆ ಖಂಡನೆ

ಹನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಹನೂರಿನಲ್ಲಿ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ತಾಲೂಕು ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಮಹಿಳೆಯರು ಸೇರಿದಂತೆ ನೆರೆದಿದ್ದ ನೂರಾರು ರೈತರು ಅರಣ್ಯ ಇಲಾಖೆಯ ಕಾರ್ಯವೈಖರಿಯ ವಿರುದ್ಧ ಘೋಷಣೆಯನ್ನು ಕೂಗಿದರು. ಆಕ್ರೋಶ ವ್ಯಕ್ತಪಡಿಸುತ್ತ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಅರಣ್ಯ ಇಲಾಖೆಯ ಕಚೇರಿ ಮುಂಭಾಗಕ್ಕೆ ತೆರಳಿ ಧರಣಿ ಕುಳಿತರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ಭಾಗವು ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದ್ದು, ಇಲ್ಲಿನ ರೈತರು ಕೃಷಿಯ ಜತೆಗೆ ನಾಟಿ ಹಸುಗಳನ್ನು ಸಾಕಣೆ ಮಾಡುವುದರ ಮೂಲಕ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಇತ್ತ ಗೋಪಿನಾಥಂ ಆಲಂಬಾಡಿ, ಅಪ್ಪುಕಾಮ್‌ಪಟ್ಟಿ, ಜಂಬುಕಪಟ್ಟಿ ಹಾಗೂ ಅರಣ್ಯ ವಾಸಿಗಳಿಗೆ 2006ರ ಅರಣ್ಯ ಹಕ್ಕು ಕಾಯ್ದೆ ಅನ್ವಯ ಅಗತ್ಯ ಮೂಲ ಸೌಕರ್ಯ ಒದಗಿಸಿಲ್ಲ. ಅರಣ್ಯ ಇಲಾಖೆಯ ಕೆಲ ಅವೈಜ್ಞಾನಿಕ ನಿಯಮಗಳಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿಸಲು ನಿರ್ಧರಿಸುವುದನ್ನು ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿದ ಎಸಿಎಫ್‌ಗಳಾದ ಮನೋಹರ್ ಸ್ವಪ್ನಿಲ್ ಅಹಿರೆ, ಮರಿಸ್ವಾಮಿ ಹಾಗೂ ಉಮಾಪತಿ ಅವರು ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಆದರೆ ಗೋಪಿನಾಥಂ ಭಾಗದಲ್ಲಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿರುವ ಕಾರಣ ಅಲ್ಲಿನ ಜನರಿಗೆ ಹಕ್ಕು ಪತ್ರ ನೀಡಲು ಹಾಗೂ ಅಗತ್ಯ ಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದರು. ಇದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಧಿಕಾರಿ ಹಾಗೂ ಡಿಸಿಎಫ್ ಅವರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಂದು ಪಟ್ಟುಹಿಡಿದು ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಪೂಂಗುಡಿ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ಪಳನಿಸ್ವಾಮಿ, ಕೂಡಲೂರು ವೆಂಕಟಾಚಲ, ಸೋಮಣ್ಣ, ಶಿವಣ್ಣ, ನಾಗರಾಜು ಹಾಗೂ ಇನ್ನಿತರರು ಇದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹನೂರಿನಲ್ಲಿ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿದರು. ಅಮ್ಜಾದ್‌ಖಾನ್, ಪೂಂಗುಡಿ, ವೆಂಕಟಾಚಲ ಇತರರು ಇದ್ದರು.