ನ್ಯೂಸ್

ಸ್ಟಾಲಿನ್ ಹೇಳಿಕೆಗೆ ಖಂಡನೆ ; ಕ್ಷಮೆ ಯಾಚಿಸಲು ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹ

ಬೆಂಗಳೂರು: ಸನಾತನ ಧರ್ಮವನ್ನು ಅಳಿಸಿ ಹಾಕಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ.

ಸಚಿವರಾಗಿ ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮಾಣ ವಚನ ಸ್ವೀಕರಿಸಿ ಅವರು ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯು ಅತ್ಯಂತ ಪ್ರಚೋದನಾಕಾರಿ ಮತ್ತು ಸಮಾಜದಲ್ಲಿ ಅಶಾಂತಿಯನ್ನು ಬಿತ್ತರಿಸುವ ನಡೆಯಾಗಿದೆ. ಸನಾತನ ಧರ್ಮವು ಕಾಲಾತೀತವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ಬ್ರಿಟಿಷರು, ಮೊಗಲರು ಕಿತ್ತು ಹಾಕಲು ಸಾಧ್ಯವಿಲ್ಲದ್ದನ್ನು ಇವರು ಕಿತ್ತು ಹಾಕುವ ಕನಸನ್ನು ಕಾಣುತ್ತಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ.

ಡಿಎಂಕೆ ಇಂಡಿಯಾ ಮೈತ್ರಿ ಕೂಟದ ಪಾಲುದಾರರು ಹೀಗಾಗಿ ಕಾಂಗ್ರೆಸ್ ಮತ್ತು ಇತರ ಮೈತ್ರಿಕೂಟದ ಪಕ್ಷಗಳು ಉದಯನಿಧಿ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಡಬೇಕು. ಅವರ ಹೇಳಿಕೆಯು ದೇಶದ ಇಡೀ ಸಮಾಜಕ್ಕೇ ಕಿಚ್ಚು ಹಚ್ಚುವ ಹೇಳಿಕೆಯಾಗಿದ್ದು ಇದನ್ನು ಮಿತ್ರ ಪಕ್ಷಗಳು ಅನುಮೋದಿಸುತ್ತದೆಯೆ ಎಂಬುದನ್ನು ಜನತೆಗೆ ತಿಳಿಸಬೇಕು. ಉದಯನಿಧಿ ಸ್ಟಾಲಿನ್ ತಮ್ಮ ಹೊಣೆಗೇಡಿ ಹೇಳಿಕೆಗೆ ಇಡೀ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.