ನ್ಯೂಸ್

ಏಕಾಏಕಿ ಲೇ ಆಫ್ ಘೋಷಣೆಗೆ ಖಂಡನೆ

ನಂಜನಗೂಡು: ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜೆನಿತ್ ಟೆಕ್ಸ್‌ಟೈಲ್ಸ್ ಕಾರ್ಖಾನೆಯಲ್ಲಿ ಏಕಾಏಕಿ ಲೇ ಆಫ್ ಘೋಷಣೆ ಮಾಡಿರುವ ಕ್ರಮವನ್ನು ಖಂಡಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ರೀಡ್ ಆ್ಯಂಡ್ ಟೇಲರ್ ಕಾರ್ಖಾನೆ ಬಂದ್ ಆಗಿರುವ ಬೆನ್ನಲ್ಲೇ ಮತ್ತೊಂದು ಬಟ್ಟೆ ಉತ್ಪಾದಕ ಕಂಪನಿ ಮುಚ್ಚುವ ಸ್ಥಿತಿಗೆ ಸಿಲುಕುವ ಮೂಲಕ ಕಾರ್ಮಿಕರಿಗೆ ಆಘಾತ ಉಂಟು ಮಾಡಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಕಾರ್ಮಿಕರು ಕಾರ್ಖಾನೆಯ ನೊಟೀಸ್ ಬೋರ್ಡ್‌ನಲ್ಲಿ ಲೇ ಆಫ್ ಪ್ರಕಟಿಸಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಆಡಳಿತ ಮಂಡಳಿಯ ಈ ನಡೆಯನ್ನು ಖಂಡಿಸಿ ಮುಖ್ಯದ್ವಾರದಲ್ಲಿ ಪ್ರತಿಭಟನೆ ಕೈಗೊಂಡಿದ್ದು ನ್ಯಾಯ ಸಿಗುವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಾರ್ಖಾನೆ ನಷ್ಟದಲ್ಲಿದ್ದರೆ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಗಮನಕ್ಕೆ ತಂದು ನಂತರ ವಿಭಾಗೀಯ ಕಾರ್ಮಿಕ ಆಯುಕ್ತರ ಕಚೇರಿಯಿಂದ ಅನುಮತಿ ಪಡೆದು ನಂತರ ಲೇ ಆಫ್ ಘೋಷಣೆ ಮಾಡಿ ಕಾರ್ಮಿಕರಿಗೆ ಶೇ.50ರಷ್ಟು ವೇತನ ನೀಡಬೇಕೆಂಬ ನಿಯಮವಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಲೇ ಆಫ್ ಘೋಷಣೆ ಮಾಡಿರುವುದು ಕಾರ್ಮಿಕ ಇಲಾಖೆ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಕಾರ್ಮಿಕ ಸಂಘಟನೆಯ ಅಧ್ಯಕ್ಷ ಟಿ.ಎಸ್.ಮಹದೇವಪ್ಪ ದೂರಿದ್ದಾರೆ.

ಲಾಭದಾಯಕವಾಗಿದ್ದರೂ ಆಡಳಿತ ಮಂಡಳಿ ಕಾರ್ಖಾನೆ ಮುಚ್ಚುವ ಹುನ್ನಾರ ನಡೆಸಿದೆ. ಆಗಸ್ಟ್‌ವರೆಗೆ ಬೇಕಾಗುಷ್ಟು ಕಚ್ಚಾ ಸಾಮಾಗ್ರಿಯನ್ನು ಸಂಗ್ರಹಿಸಿಕೊಂಡಿದ್ದರೂ ಅದನ್ನು ಬೆಂಗಳೂರಿನ ಮತ್ತೊಂದು ಕಾರ್ಖಾನೆಗೆ ಸಾಗಿಸುವ ಮೂಲಕ 20 ವರ್ಷದಿಂದ ದುಡಿಯುತ್ತಿರುವ ಕಾರ್ಮಿಕರನ್ನು ಬೀದಿಪಾಲು ಮಾಡಲು ಮುಂದಾಗಿದೆ. ಮಂಗಳವಾರ ರಾತ್ರಿವರೆಗೂ ಉತ್ಪಾದನೆ ನಡೆಸಿ ರಾತ್ರೋರಾತ್ರಿ ಕರೊನಾ ತುರ್ತು ಪರಿಸ್ಥಿತಿಯನ್ನು ನೆಪ ಮಾಡಿಕೊಂಡು ಇಂತಹ ನಿರ್ಧಾರಕ್ಕೆ ಬರಲಾಗಿದೆ. ಕಾರ್ಮಿಕರಿಗೆ ನ್ಯಾಯ ಸಿಗುವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘಟನೆಯ ಖಜಾಂಚಿ ರಾಜು ಎಚ್ಚರಿಸಿದ್ದಾರೆ.

ಕಾರ್ಖಾನೆಯ ಮುಂದೆಯೇ ಜಮಾಯಿಸಿರುವ ಕಾರ್ಮಿಕರ ಸಂಕಷ್ಟ ಆಲಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ. ಜತೆಗೆ ಆಡಳಿತ ಮಂಡಳಿಯೂ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿಲ್ಲ. ಹೀಗಾಗಿ ಕಾರ್ಮಿಕರು ಕಾರ್ಖಾನೆಯಲ್ಲೇ ಬೀಡು ಬಿಟ್ಟಿದ್ದು ಹೋರಾಟವನ್ನು ಮುಂದುವರಿಸಿದ್ದಾರೆ.