ನ್ಯೂಸ್

ಸಿ.ಟಿ.ರವಿ ಹೇಳಿಕೆ ಖಂಡನೆ

ತಿ.ನರಸೀಪುರ: ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರು ತಕ್ಷಣವೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಈ.ರಾಜು ಅಗ್ರಹಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಉನ್ನತ ಸ್ಥಾನ ಅನುಭವಿಸಿದ ನಿಮ್ಮಂತಹ ನಾಯಕರಿಗೆ ಇಂತಹ ಹೇಳಿಕೆ ನಿಮಗೆ ತಕ್ಕುದಲ್ಲ. ನಿಮ್ಮ ಅವಹೇಳನಕಾರಿ ಹೇಳಿಕೆಯಿಂದ ಅಖಂಡ ಕರ್ನಾಟಕದಲ್ಲಿರುವ ಸವಿತಾ ಸಮುದಾಯಕ್ಕೆ ಅಪಾರ ನೋವಾಗಿದೆ. ಹಾಗಾಗಿ ಸಿ.ಟಿ.ರವಿ ಅವರು ತಕ್ಷಣ ಬಹಿರಂಗ ಕ್ಷಮೆಯಾಚಿಸಬೇಕು.ಇಲ್ಲದಿದ್ದಲ್ಲಿ ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.