ಬೆಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲೇ ರಾಜ್ಯಪಾಲರು ಪ್ರಾಮಾಣಿಕ ಮುಖ್ಯಮಂತ್ರಿ ಹಾಗೂ ನಿರಪರಾಧಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುತಂತ್ರಕ್ಕೆ ತಲೆಬಾಗಿ ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಿಜೆಪಿ ಮತ್ತು ಜನತಾ ದಳದ ಶಾಸಕರುಗಳು ಭ್ರಷ್ಟಾಚಾರ ನಡೆಸಿದ್ದಾರೆ. ಆದರೆ, ಯಾವುದೇ ಹಗರಣದಲ್ಲಿ ಭಾಗಿಯಾಗದ ಸಿದ್ದರಾಮಯ್ಯನವರನ್ನ ಈ ಪ್ರಕರಣದಲ್ಲಿ ಸಿಲುಕಿಸಲು ರಾಜಭವನ ದುರ್ಬಳಕೆ ಮಾಡಿಕೊಂಡಿರುವುದು ಇಂದು ಸಾಬೀತಾಗಿದೆ.
ಮುಖ್ಯ ಮಂತ್ರಿಗಳನ್ನು ಕಳಂಕಿತರನ್ನಾಗಿ ಮಾಡಲು ಕೇಂದ್ರ ಸರ್ಕಾರ ನಡೆಸಿರುವ ಕುತಂತ್ರ ಇದಾಗಿದ್ದು, ರಾಜ್ಯಪಾಲರ ಮೂಲಕ ಇಂದು ಬಹಿರಂಗವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಮೌನ ಪ್ರತಿಭಟನೆಯಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರು ಬಿಜೆಪಿಯ ಅನೇಕ ಹಿಂದಿನ ಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ ಹಾಗೂ ಎಚ್. ಡಿ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ. ಅಲ್ಲದೆ, ಉದ್ದೇಶ ಪೂರ್ವಕವಾಗಿ ಬಿಜೆಪಿ ಜನತಾದಳದ ನಾಯಕರ ಒತ್ತಾಯದ ಮೇರೆಗೆ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದು, ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ವಾಮ ಮಾರ್ಗದಲ್ಲಿ ನಡೆಸುತ್ತಿರುವ ಪ್ರಯತ್ನಕ್ಕೆ ರಾಜ್ಯದ ಜನ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದರು
ರಾಜ್ಯಪಾಲರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಬಗ್ಗೆ ಗಮನ ಹರಿಸಬೇಕಾಗಿತ್ತು. ಇದು ಕೇವಲ ಬಿಜೆಪಿಯ ಒತ್ತಾಸೆಯಿಂದ ತನಿಖೆಗೆ ಆದೇಶ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು
ಈ ಕ್ರಮ ಸಂವಿಧಾನಕ್ಕೆ ಎಸೆದ ಅಪಚಾರವಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಮುಖಂಡ ಜನಾರ್ಧನ್, ವಕ್ತಾರರಾದ ಆನಂದ್,ಪ್ರಕಾಶ್, ರವಿಕುಮಾರ್ ,ಉಮೇಶ್ ಹೇಮರಾಜ್, ನವೀನ್, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.