ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹಾಗೂ ಅವರ ಪತ್ನಿ ಉಷಾ ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ ಅಮೆರಿಕ ನಡುವಿನ ಸುಂಕ, ವ್ಯಾಪಾರ, ಪ್ರಾದೇಶಿಕ ಭದ್ರತೆ ಮತ್ತಿತರ ವಿಷಯಗಳು ಸೇರಿದಂತೆ ದ್ವಿಪಕ್ಷೀಯ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ಆಗಲಿದೆ. ಆ ಬಳಿಕ ಅತಿಥಿಗಳಿಗೆ ಪ್ರಧಾನಿ ಮೋದಿ ಔತಣಕೂಟ ಆಯೋಜಿಸಿದ್ದು, ವ್ಯಾನ್ಸ್-ಉಷಾ ದಂಪತಿಯ ಮಕ್ಕಳಾದ ಇವಾನ್, ವಿವೇಕ್, ಮಿರಾಬೆಲ್ ಕೂಡ ಇರಲಿದ್ದಾರೆ. ಭಾರತಕ್ಕೆ ನಾಲ್ಕು ದಿನಗಳ ಪ್ರವಾಸದ ಮೇಲೆ ಆಗಮಿಸಲಿರುವ ಇವರು ಪಾಲಂ ಏರ್ಬೇಸ್ಗೆ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಂದಿಳಿಯುವ ನಿರೀಕ್ಷೆ ಇದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 60 ದೇಶಗಳ ವಿರುದ್ಧ ಸುಂಕ ಸಮರ ಘೋಷಿಸಿ ತಡೆದ ಬಳಿಕ ಭಾರತಕ್ಕೆ ವ್ಯಾನ್ಸ್ ಅವರ ಮೊದಲ ಭೇಟಿ ಇದಾಗಿರುವುದರಿಂದ ಮೋದಿ ಅವರ ಜತೆಗಿನ ಮಾತುಕತೆ ಕುತೂಹಲ ಕೆರಳಿಸಿದೆ. ಸುಂಕ ಮತ್ತು ಮಾರುಕಟ್ಟೆ ಪ್ರವೇಶ ಸೇರಿ ವಿವಿಧ ವಿಷಯಗಳನ್ನು ಒಳಗೊಂಡ ದ್ವಿಪಕ್ಷೀಯ ಒಪ್ಪಂದ ಹಿನ್ನೆಲೆಯಲ್ಲಿ ಮಾತುಕತೆ ನಡೆಯಲಿರುವ ನಿರೀಕ್ಷೆ ಕೂಡ ಗರಿಗೆದರಿದೆ.
ಯಾರೆಲ್ಲ ಭಾಗಿ?: ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಅವರ ಜೊತೆಗಿನ ಪ್ರಧಾನಿ ಮೋದಿ ಅವರ ನೇತೃತ್ವದ ಮಾತುಕತೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಸೇರಿ ಹಲವು ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ಸುಂಕ ಸಮರ ಸಾರಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿರುವುದರಿಂದ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಪತ್ನಿ ಉಷಾ ಭಾರತ ಮೂಲದವರೇ ಆಗಿರುವುದರಿಂದ ಈ ಮಾತುಕತೆ ಭಾರತಕ್ಕೆ ಪ್ರಯೋಜನಕಾರಿ ಆಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ 500 ಬಿಲಿಯನ್ ಡಾಲರ್ಗೆ ದ್ವಿಗುಣಗೊಳಿಸುವ ‘ಮಿಷನ್ 500’ ಗುರಿಯನ್ನು ಟ್ರಂಪ್-ಮೋದಿ ಹೊಂದಿರುವುದರಿಂದಲೂ ವ್ಯಾನ್ಸ್ ಜೊತೆಗಿನ ಈ ಮಾತುಕತೆ ಮಹತ್ವದ್ದೆನಿಸಿದೆ. ದ್ವಿತೀಯ ಮಹಿಳೆ ಉಷಾ ಭಾರತೀಯ ಮೂಲದವರಾಗಿದ್ದು, ಭಾರತ-ಅಮೆರಿಕ ಸಂಬಂಧಗಳಿಗೆ ಸಾಂಸ್ಕೃತಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತೆಲುಗá--ಭಾರತೀಯ ಹಿನ್ನೆಲೆ ಭಾರತೀಯ-ಅಮೆರಿಕನ್ ಸಮುದಾಯದ ಜತೆಗಿನ ಸಂಪರ್ಕವನ್ನು ಬಲಪಡಿಸಿದೆ. ಹೀಗಾಗಿ ಸೋಮವಾರ ಮೋದಿ ಮತ್ತು ವ್ಯಾನ್ಸ್ ದಂಪತಿ ಜತೆಗಿನ ಮಾತುಕತೆ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖವಾಗಿದ್ದು, ಗಮನ ಸೆಳೆದಿದೆ.
ವ್ಯಾನ್ಸ್ ಅವರ ಪತ್ನಿ ಭಾರತೀಯ ಮೂಲದವರಾಗಿದ್ದು, ಇವರ ಪೂರ್ಣ ಹೆಸರು ಉಷಾ ಚಿಲುಕೂರಿ ವ್ಯಾನ್ಸ್. ಭಾರತೀಯ ಮೂಲದ ಅಮೆರಿಕನ್ ವಕೀಲೆ ಆಗಿರುವ ಇವರು, ಪ್ರಪ್ರಥಮ ಭಾರತೀಯ-ಅಮೆರಿಕನ್ ಮತ್ತು ತೆಲುಗು-ಹಿಂದು ದ್ವಿತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಇವರ ತಂದೆ ರಾಧಾಕೃಷ್ಣ ಚಿಲುಕೂರಿ, ತಾಯಿ ಲಕ್ಷ್ಮೀ ಚಿಲುಕೂರಿ 1980ರ ದಶಕದಲ್ಲಿ ಆಂಧ್ರ ಪ್ರದೇಶದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ತಂದೆ ಐಐಟಿ ಮದ್ರಾಸ್ ಇಂಜಿನಿಯರ್ ಪದವೀಧರ ರಾಗಿದ್ದು, ಸ್ಯಾನ್ಡಿಯಾಗೊ ಸ್ಟೇಟ್ ಯುನಿವರ್ಸಿಟಿ ಯಲ್ಲಿ ಉಪನ್ಯಾಸಕ ರಾಗಿದ್ದರು. ತಾಯಿ ಆಣ್ವಿಕ ಜೀವಶಾಸ್ತ್ರಜ್ಞೆ. ಕ್ಯಾಲಿಫೋರ್ನಿಯಾದ ಸ್ಯಾನ್ಡಿಯಾಗೊ ಕೌಂಟಿಯ ಉಪನಗರವೊಂದರಲ್ಲಿ 1986ರ ಜ.6ರಂದು ಉಷಾ ಜನಿಸಿದರು. ತೆಲುಗು ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇವರ ಕುಟುಂಬದ ಮೂಲ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಸೈಪುರಂ ಗ್ರಾಮದಲ್ಲಿದೆ.
ಭಾರತಕ್ಕೆ ಭೇಟಿ ನೀಡಲಿರುವ ವ್ಯಾನ್ಸ್-ಉಷಾ ಕುಟುಂಬವನ್ನು ಪಾಲಂ ಏರ್ಬೇಸ್ನಲ್ಲಿ ಹಿರಿಯ ಕೇಂದ್ರ ಸಚಿವರು ಬರಮಾಡಿಕೊಳ್ಳಲಿದ್ದಾರೆ. ಬಳಿಕ ಅವರು ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನದಲ್ಲಿ ದರ್ಶನ ಪಡೆಯಲಿದ್ದಾರೆ. ಜೊತೆಗೆ ಭಾರತೀಯ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಸಿಗುವ ಶಾಪಿಂಗ್ ಕಾಂಪ್ಲೆಕ್ಸ್ಗೂ
ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಸಂಜೆ 6.30ಕ್ಕೆ ‘7 ಲೋಕ ಕಲ್ಯಾಣ ಮಾರ್ಗ’ದ ನಿವಾಸದಲ್ಲಿ ಪ್ರಧಾನಿ ಮೋದಿಯವರು ವ್ಯಾನ್ಸ್ ಕುಟುಂಬವನ್ನು ಸ್ವಾಗತಿಸಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಔತಣಕೂಟ ಇರಲಿದೆ. ನಂತರ ವ್ಯಾನ್ಸ್ ಕುಟುಂಬ ರಾತ್ರಿ ಜೈಪುರಕ್ಕೆ ತೆರಳಲಿದೆ. 22ರಂದು ಜೈಪುರ, 23ರಂದು ಆಗ್ರಾದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಅವರು ವೀಕ್ಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಸರಿಸುತ್ತಿರುವ ಕಠಿಣ ವಲಸೆ ನೀತಿಗಳ ವಿರುದ್ಧ ಶನಿವಾರ ಅಮೆರಿಕದಾದ್ಯಂತ ಎರಡನೇ ಸುತ್ತಿನ ಪ್ರತಿಭಟನೆಯ ಅಲೆಯೆದ್ದಿದ್ದು ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಬಲಪ್ರದರ್ಶನಗಳನ್ನು ನಡೆಸಿದ್ದಾರೆ. ಆತಂಕಕಾರಿ ವಲಸೆ ನೀತಿಗಳನ್ನು ಖಂಡಿಸುವ ಭಿತ್ತಿಪತ್ರಗಳನ್ನು ಹಿಡಿದಿದ್ದ ಪ್ರತಿಭಟನೆಕಾರರು ಟ್ರಂಪ್ ಧೋರಣೆ ವಿರುದ್ಧ ಘೊಷಣೆಗಳನ್ನು ಕೂಗಿದರು. ಏಪ್ರಿಲ್ 5ರಂದು ‘ಹ್ಯಾಂಡ್ಸ್ ಆಫ್’ ಹೆಸರಿನಲ್ಲಿ ಇದೇ ರೀತಿಯ ವ್ಯಾಪಕ ಪ್ರತಿಭಟನೆ ನಡೆದಿತ್ತು. ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಟ್ರಂಪ್ ಜಾರಿಗೊಳಿಸುತ್ತಿರುವ ವಲಸೆ ನೀತಿಗಳನ್ನು ಖಂಡಿಸಿ ಅಂದು 51 ರಾಜ್ಯಗಳಲ್ಲಿ ಜನರು ಬೀದಿಗಿಳಿದು ಆಕ್ರೋಶ ದಾಖಲಿಸಿದ್ದರು. ಶನಿವಾರ ನ್ಯೂಯಾರ್ಕ್ನ ಮುಖ್ಯ ಲೈಬ್ರರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ‘ನೋ ಕಿಂಗ್ಸ್ ಇನ್ ಅಮೆರಿಕ’ ಮತ್ತು ‘ರೆಸಿಸ್ಟ್ ಟೈರನಿ’ (ಸರ್ವಾಧಿಕಾರವನ್ನು ಪ್ರತಿರೋಧಿಸಿ) ಇತ್ಯಾದಿ ಘೊಷಣೆಗಳನ್ನು ಕೂಗಿದರು. ದೀರ್ಘ ಸಮಯದಿಂದ ಗೌರವಿಸಲಾಗುತ್ತಿದ್ದ ಸಾಂವಿಧಾನಿಕ ನಿಯಮಗಳಿಗೆ ಅಧ್ಯಕ್ಷ ಟ್ರಂಪ್ ಅಪಾಯ ತರುತ್ತಿದ್ದಾರೆ ಎಂದು ವಾಷಿಂಗ್ಟನ್ನಲ್ಲಿ ಪ್ರತಿಭಟನೆಕಾರರು ಆರೋಪಿಸಿದರು.