ಯೋಗಾ ದಿನಾಚರಣೆಯನ್ನು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹನುಮಂತರಾವ್​ ಉದ್ಘಾಟಿಸಿದರು. ಸುರೇಶ್​ ಕುಮಾರ್​, ವಿ.ಬಾಬು, ಲಕ್ಷ್ಮಿಭಟ್​ ಇದ್ದರು.  
ನ್ಯೂಸ್

ಯೋಗದಿಂದ ಹೆಚ್ಚಲಿದೆ ಏಕಾಗ್ರತೆ

ಕಿರುವಾರ ಎಸ್.ಸುದರ್ಶನ್

ಕೋಲಾರ: ನಗರದ ಆರ್​.ಎಲ್​.ಜಾಲಪ್ಪ ಶಾಲೆಯಲ್ಲಿ ನಂ-1 ದಿನಪತ್ರಿಕೆ ವಿಜಯವಾಣಿ, ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಹಯೋಗದಿಂದ ಶುಕ್ರವಾರ ಅಂತಾರಾಷ್ಟ್ರೀಯ 10ನೇ ಯೋಗ ದಿನ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಯೋಗ ಶಿಕ್ಷಕಿ ಮಂಜುಳಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗ ಭಂಗಿಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.
ಅದೋಮುಖಾಸನ, ವಜ್ರಾಸನ, ಸೂರ್ಯ ನಮಸ್ಕಾರ, ಧ್ಯಾನ, ಷಣ್ಮುಖಾಸನ ಸೇರಿ ವಿವಿಧ ಆಸನಗಳ ಮೂಲಕ ವಿದ್ಯಾರ್ಥಿಗಳು ಯೋಗ ಕುರಿತು ಅರಿವು ಪಡೆದುಕೊಂಡರು. ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ನಯನಾ, ದೃತಿ, ನವ್ಯಾ ಯೋಗ ಕುರಿತು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ದೇವರಾಜ ಅರಸು ವೈದ್ಯಕಿಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹನುಮಂತರಾವ್​ ಮಾತನಾಡಿ, ಯೋಗದ ಮಹತ್ವ ಅರಿತುಕೊಂಡವರು ನಿತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಯೋಗ ಕಲಿಸಲು ಶಿಕ್ಷಕರನ್ನು ನೇಮಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಿತ್ಯ ಯೋಗ, ಧ್ಯಾನ ಮಾಡುವುದರಿಂದ ಮನಸ್ಸು ಉಲ್ಲಾಸವಾಗಿ ಇರುತ್ತದೆ, ಆಗ ಓದಿನ ಕಡೆ ಏಕಾಗ್ರತೆ ಹೆಚ್ಚಾಗಿ ಶೈಕ್ಷಣಿಕ ಸಾಧನೆಗೆ ಸಹಕಾರಿ ಆಗುತ್ತದೆ ಎಂದರು.
ಮನೆಗೆ ಹೋಗಿ ಮೊಬೈಲ್​, ಟಿವಿ ನೋಡುವ ಬದಲು ಯೋಗ ಅಭ್ಯಾಸ ಮಾಡಬೇಕು. ಜೀವನದ ಗುರಿ ಸಾಧನೆ ಮಾಡಲು ಛಲ ಇರಬೇಕು. ಸಾಧನೆಗೆ ಯೋಗವು ಬಹಳ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಮಾತನಾಡಿ, ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದು ಭಾರತ, ಇದರಿಂದಲೇ ದೇಶವನ್ನು ವಿಶ್ವಗುರು ಎಂದು ಕರೆಯುತ್ತಾರೆ. ಮಕ್ಕಳು ದೇಶದ ಭವಿಷ್ಯ, ಸಮಯ ಪಾಲನೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಆಗ ಮಾತ್ರ ವಿಶ್ವ ಗುರು ಎಂಬುದಕ್ಕೆ ಅರ್ಥ ಸಿಗುತ್ತದೆ. ಮನುಷ್ಯ ಶೇ.20 ಅನ್ನ ಸೇವಿಸಿದರೆ ಶೇ.80 ಹಣ್ಣು, ತರಕಾರಿ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಪೌಷ್ಟಿಕತೆ ಹೆಚ್ಚುತ್ತದೆ. ಯೋಗ ಒಂದು ದಿನಕ್ಕೆ ಸಿಮೀತವಾಗಬಹುದು, ನಿತ್ಯ ಅಭ್ಯಾಸವಾಗಬೇಕು ಎಂದು ತಿಳಿಸಿದರು.
ಪ್ರಾಂಶುಪಾಲೆ ಲಕ್ಷ್ಮಿಭಟ್​ ಮಾತನಾಡಿ, ಮಕ್ಕಳು ನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಜೀವನ ಗುರಿ ಸಾಧನೆಗೆ ಸಹಕಾರಿ ಸಿಗುತ್ತದೆ ಎಂದರು.
ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಪೂರಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಲ್ಲಿ ಶಿಸ್ತು, ಸಂಯಮ ಪಾಲನೆ ಸಮರ್ಪಕವಾಗಿರಬೇಕು. ಸೇವಾ ಮನೋಭಾವ ಮೂಡಿಸುವ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್​.ಸುರೇಶ್​, ಸ್ಕೌಟ್ಸ್​ ಶಿಕ್ಷಕ ಶಿವಕುಮಾರ್​, ಶಾಲೆಯ ಶಿಕ್ಷಕರು, ಬೋಧಕೇತರ ವರ್ಗದವರು ಹಾಜರಿದ್ದರು.

  • ಯೋಗದಿಂದ ಒತ್ತಡ ನಿವಾರಣೆ
    ದೇಶದ ಬಹುತೇಕ ಮಂದಿ ಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಏಕೆಂದರೆ ಕೆಲಸದ ಒತ್ತಡ ನಿವಾರಣೆಯಾಗಿ ಆರೋಗ್ಯವಂತಾಗಿರಲು ಸಾಧ್ಯ. ಉಪನಿಷತ್​, ವೇದಗಳ ಕಾಲದಿಂದಲೂ ಪತಂಜಲಿ ಯೋಗ ಚಾಲ್ತಿಯಲ್ಲಿದೆ, ಯೋಗವನ್ನು ಯಾವುದೇ ವಯಸ್ಸಿನವರು ಅಭ್ಯಾಸ ಮಾಡಬಹುದು, ಮನಸ್ಸನ್ನು ಸುಸ್ಥಿತಿಯಲ್ಲಿಡಲು ಧಾನ್ಯ ಪ್ರಮುಖ ಪಾತ್ರವಹಿಸುತ್ತದೆ ಎಂದು 9ನೇ ತರಗತಿ ನಯನ ತಿಳಿಸಿದರು.
  • ಯೋಗದಿಂದ ಬಹುಪಯೋಗ
    ದೈಹಿಕವಾಗಿ, ಮಾನಸಿಕವಾಗಿ ಸಧೃಡವಾಗಿರಲು ಯೋಗವು ಸಹಕಾರಿಯಾಗುತ್ತದೆ. ಯೋಗದಿಂದ ಬಹು ಉಪಯೋಗಗಳು ಇದ್ದು, ಇದರ ಮಹತ್ವದ ಅರಿವು ಪಡೆದುಕೊಳ್ಳಬೇಕು ಎಂದು 9ನೇ ತರಗತಿ ನವ್ಯ ಹೇಳಿದರು.
  • ಪ್ರಾಚಿನ ಕಾಲದ ಕಲೆ
    ಭಾರತಕ್ಕೆ ಯೋಗವು ಉನ್ನತ ಕೊಡುಗೆ ನೀಡಿದೆ. ಇದು ಪ್ರಾಚಿನ ಕಾಲದ ಕಲೆಯು ಹೌದು, ಇದಕ್ಕೆ
    6,000 ವರ್ಷಗಳ ಇತಿಹಾಸ ಇದೆ ಎಂದು 8ನೇ ತರಗತಿ ಧೃತಿ ತಿಳಿಸಿದರು.
    ಯೋಗವನ್ನು ಸರಳವಾಗಿ ಅಭ್ಯಾಸ ಮಾಡಬಹುದು, ನಿತ್ಯ ಅಭ್ಯಾಸ ಮಾಡುವವರು ಆರೋಗ್ಯವಾಗಿ ಇರುತ್ತಾರೆ ಎಂಬುದು ಎಷ್ಟು ಸತ್ಯವೊ, ಮಾನಸಿಕವಾಗಿಯು ಆರೋಗ್ಯವಂತರಾಗಿ ಇರುತ್ತಾರೆ ಎಂಬುದು ಅಷ್ಟೇ ಸತ್ಯ ಎಂದರು.