ಉಡುಗುಣಿ ತಾಳಗುಂದ ಮತ್ತು ಹೊಸೂರು ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಶಿರಾಳಕೊಪ್ಪದಲ್ಲಿ ರೈತ ಸಂಘದ ಸದಸ್ಯರು ಉಪ ತಹಸೀಲ್ದಾರ್ ಸಾಕಮ್ಮ ಅವರಿಗೆ ಮನವಿ ಸಲ್ಲಿಸಿದರು. ರಾಜಪ್ಪ, ಪುಟ್ಟನಗೌಡ, ಕೊಟ್ರೇಶ್, ಸುರೇಶ್ ಗೌಡ ಇತರರಿದ್ದರು.  
ನ್ಯೂಸ್

ಕೆರೆಗೆ ನೀರು ತುಂಬಿಸಲು ಒತ್ತಾಯ

ಶಿರಾಳಕೊಪ್ಪ: ತಾಳಗುಂದ ಮತ್ತು ಹೊಸೂರು ಹೋಬಳಿಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ಪಟ್ಟಣದ ನಾಡ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು ಸೋಮವಾರ ಪ್ರತಿಭಟಿಸಿ ಉಪ ತಹಸೀಲ್ದಾರ್ ಸಾಕಮ್ಮ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಜಲಾಶಯ ಭರ್ತಿಯಾಗಿವೆ. ಆದರೆ ಈವರೆಗೆ ಉಡುಗಣಿ ತಾಳಗುಂದ ಮತ್ತು ಹೊಸೂರು ಹೋಬಳಿಗಳ ಕೆರೆಗಳಿಗೆ ಏತ ನೀರಾವರಿ ನೀರು ತುಂಬಿಸುವ ಕೆಲಸವಾಗಿಲ್ಲ ಎಂದು ದೂರಿದರು.

ಇದುವರೆಗೆ ರೈತರು ಏತ ನೀರಾವರಿ ಮೂಲಕ ನೀರು ತುಂಬಿಸುತ್ತಾರೆ ಎಂದು ಭರವಸೆ ಹೊಂದಿದ್ದರು. ಈಗಲೂ ಸಹ ಭರವಸೆ ಹೊಂದಿದ್ದಾರೆ. ಎಲ್ಲ ರೈತರು ಅಡಕೆ ತೋಟಕ್ಕೆ ಈ ನೀರನ್ನು ಅವಲಂಬಿಸಿದ್ದಾರೆ. ಇನ್ನು ಕೆಲವರು ಜೀವನೋಪಾಯಕ್ಕಾಗಿ ಬೇಸಿಗೆಯಲ್ಲಿ ಮೆಕ್ಕೆಜೋಳ, ಭತ್ತದ ಬೆಳೆ ಬಿತ್ತನೆಗೆ ಬರದ ಸಿದ್ಧತೆ ಮಾಡಿಕೊಂಡಿದ್ದಾರೆ. ಕೂಡಲೆ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ, ಕಾರ್ಯದರ್ಶಿ ಕೊಟ್ರೇಶ್, ತಾಲೂಕು ಗೌರವಾಧ್ಯಕ್ಷ ಬಿಳಕಿ ಸುರೇಶ್ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ತಾಳಗುಂದ, ಉಪಾಧ್ಯಕ್ಷ ಶೀರಿಹಳ್ಳಿ ಕರಿಬಸವ ಇತರರಿದ್ದರು.