ನ್ಯೂಸ್

ಮೈಸೂರು ಸಮಗ್ರ ಅಭಿವೃದ್ಧಿ: ಸಚಿವ ಬೈರತಿ ಸುರೇಶ್ | PPP model

ಬೆಂಗಳೂರು: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಸಾಂಸ್ಕೃತಿಕ ನಗರಿ, ಮೈಸೂರು ನವ ನಿರ್ಮಾಣದ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪೂರ್ವಸಿದ್ಧತೆಗಳಿಗೆ ಚಾಲನೆ ನೀಡಿದೆ.

ಮಹತ್ವಾಕಾಂಕ್ಷಿ ಯೋಜನೆ ಕುರಿತು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ಗುರುವಾರ ನಡೆಯಿತು. ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ನಗರ ವ್ಯಾಪ್ತಿಗೆ ತಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಸಿದ್ಧತೆ ಬಗ್ಗೆ ಪರಿಶೀಲಿಸಲಾಯಿತು.

ಐಟಿ, ಬಿಟಿ ಸೇರಿ ಕೈಗಾರಿಕೆಗಳು, ವಸತಿ ಯೋಜನೆಗಳು ಹೆಚ್ಚಾಗುತ್ತಿವೆ. ನಗರ ವಿಸ್ತರಣೆಯಾಗುತ್ತಿದ್ದು, ಪೂರಕವಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವತ್ತ ಸಿಎಂ ಸಿದ್ದರಾಮಯ್ಯ ಗಮನಹರಿಸಿದ್ದಾರೆ ಎಂದು ಬೈರತಿ ಸುರೇಶ್ ತಿಳಿಸಿದರು.

ನಾಲ್ಕು ಆಧಾರಸ್ತಂಭ

ನವ ಮೈಸೂರು ನಿರ್ಮಾಣ ಯೋಜನೆಗೆ ಪ್ರಮುಖವಾಗಿ ಐದು ಆಧಾರಸ್ತಂಭಗಳನ್ನು ಗುರುತಿಸಲಾಗಿದೆ. ಉದ್ಯಮ ಮೈಸೂರು, ನಿಪುಣ ಮೈಸೂರು, ಸುಖೀವಾಸ ಮೈಸೂರು, ಪ್ರವಾಸೋದ್ಯಮ ಮೈಸೂರು ಮತ್ತು ಸಂಚಾರ ಮೈಸೂರು ಎಂಬ ಪ್ರಮುಖವಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂಬ ಮಾಹಿತಿ ನೀಡಿದರು.

ಉದ್ಯಮ ಮೈಸೂರು ಕ್ಷೇತ್ರದ ಯೋಜನೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಹಬ್ ಸ್ಥಾಪನೆ ಮಾಡುವುದು, ಒಟ್ಟಾರೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದು. ನಿಪುಣ ಮೈಸೂರು ವಲಯವನ್ನು ಸ್ಥಾಪಿಸಿ ಇದರ ಮೂಲಕ ಕೌಶಲ್ಯ ತರಬೇತಿ ಮತ್ತು ಕೌಶಲ್ಯಾಧಾರಿತ ಉದ್ಯೋಗಗಳಿಗೆ ಆದ್ಯತೆ ನೀಡುವುದು, ಉದ್ಯಮಶೀಲತ್ವ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು.

ಸುಖೀವಾಸದಡಿಯಲ್ಲಿ ಸುಸಜ್ಜಿತವಾದ ಸಮಗ್ರ ಟೆಕ್ ಸಿಟಿ ನಿರ್ಮಾಣ, ಪ್ರವಾಸೋದ್ಯಮ ಮೈಸೂರು ಅಡಿಯಲ್ಲಿ ಸಮಗ್ರ ಆರೋಗ್ಯ, ಕ್ಷೇಮ ಮತ್ತು ಪುನಶ್ಚೇತನ ಕೇಂದ್ರದ ಆರಂಭ ಮತ್ತು ಸಂಚಾರ ಮೈಸೂರು ಎಂಬ ಹೆಸರಿನ ಯೋಜನೆಯಡಿ ಮೈಸೂರು ಮೆಟ್ರೋ ಯೋಜನೆ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.

ಪಿಪಿಪಿ ಮಾದರಿ

ಮಹತ್ವಕಾಂಕ್ಷಿ ಸಮಗ್ರ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೀಗಾಗಿ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ ಎಂದರು.

ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರಿಗಿದೆ. ಹೂಡಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಬಂಡವಾಳ ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಆಕರ್ಷಿಸುವ ದಿಸೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಯಾವುದೇ ತೊಂದರೆ ಇಲ್ಲದೇ ಉದ್ಯಮಗಳನ್ನು ಸ್ಥಾಪಿಸಲು ಹೂಡಿಕೆದಾರರಿಗೆ ತ್ವರಿತವಾಗಿ ಭೂಮಿ ಹಂಚಿಕೆ, ಆವಿಷ್ಕಾರ ಆಧಾರಿತ ನೀತಿಗಳನ್ನು ರೂಪಿಸುವುದು ಮತ್ತು ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.