ನ್ಯೂಸ್

ಈ ರಾಜ್ಯದಲ್ಲಿ ಸಂಪೂರ್ಣ ಅನ್​ಲಾಕ್​! ಜುಲೈ 1 ರಿಂದ ಶಾಲೆ, ಕಾಲೇಜು ಆರಂಭ

rashmirhebbur

ಹೈದರಾಬಾದ್​​ : ತೆಲಂಗಾಣದಲ್ಲಿ ಕರೊನಾ ಲಾಕ್​ಡೌನನ್ನು ಸಂಪೂರ್ಣವಾಗಿ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕರೊನಾ ಪಾಸಿಟಿವಿ ರೇಟ್​ನಲ್ಲಿ ಮಹತ್ವದ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ನರು ನೀಡಿದ ಸಲಹೆಗಳ ಮೇಲೆ ಸಂಪುಟ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆಯನ್ನು ಬೇರೆ ರಾಜ್ಯಗಳಿಗಿಂತ ತ್ವರಿತವಾಗಿ ನಿಯಂತ್ರಿಸಲು ಸಾಧ್ಯವಾಗಿದೆ. ದೇಶಾದ್ಯಂತ ಮತ್ತು ನೆರೆಹೊರೆಯ ರಾಜ್ಯಗಳಲ್ಲೂ ಕರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಲಾಕ್​ಡೌನ್​ ಅಂತ್ಯಗೊಳಿಸಲಾಗುತ್ತಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ರಾಜ್ಯದ ಎಲ್ಲಾ ಇಲಾಖೆಗಳಿಗೆ ನಿರ್ಬಂಧಗಳನ್ನು ತೆರವುಗೊಳಿಸಲು ಸರ್ಕಾರ ಆದೇಶಿಸಿದೆ. ಅಷ್ಟೇ ಅಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಎಲ್ಲ ಬಗೆಯ ಶೈಕ್ಷಣಿಕ ಸಂಸ್ಥೆಗಳನ್ನು ಜುಲೈ 1 ರಿಂದ ಪುನರಾಂಭಿಸಲು ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಶಾಲಾ ಕಾಲೇಜುಗಳ ಹಾಜರಾತಿ, ಆನ್​ಲೈನ್ ತರಗತಿಗಳು ಮತ್ತು ಇತರ ವಿಚಾರಗಳ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಇಲಾಖೆ ಪ್ರಕಟಿಸಲಿದೆ ಎನ್ನಲಾಗಿದೆ.

ಮತ್ತೆ ಸೋಂಕು ಹೆಚ್ಚಾಗದಂತೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿರುವ ಸರ್ಕಾರ, ಮಾಸ್ಕ್​ ತೊಡುವ ಮತ್ತು ಸಾಮಾಜಿಕ ಅಂತರ ಪಾಲಿಸುವ ಕೋವಿಡ್​ ಪ್ರೊಟೊಕಾಲ್​ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಿದೆ. (ಏಜೆನ್ಸೀಸ್)