ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಬಿ.ವೈ.ರಾಘವೇಂದ್ರ ಹುಬ್ಬಳ್ಳಿಯಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುಕುಲ್ ಸರಣ್ ಮಾಥುರ್, ಸಿ.ಎಂ.ಗುಪ್ತಾ ಇದ್ದರು. 
ನ್ಯೂಸ್

ರೈಲ್ವೆ ಮಾರ್ಗಗಳ ಸಮೀಕ್ಷೆ ಕಾರ್ಯ ಶೀಘ್ರ ಪೂರ್ಣಗೊಳಿಸಿ

ಶಿವಮೊಗ್ಗ: ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಶಿವಮೊಗ್ಗ-ಶೃಂಗೇರಿ-ಮಂಗಳೂರು, ಶಿವಮೊಗ್ಗ-ಶೃಂಗೇರಿ-ಚಿಕ್ಕಮಗಳೂರು-ಹಾಸನ ಮಾರ್ಗದಲ್ಲಿ ತ್ವರಿತವಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ತಾಳಗುಪ್ಪ-ಸಿದ್ಧಾಪುರ-ಶಿರಸಿ ಮೂಲಕ ಹುಬ್ಬಳ್ಳಿ ಸಂಪರ್ಕಿಸುವ ಮಾರ್ಗದ ಸಮೀಕ್ಷೆ ನಡೆಯಬೇಕಿದೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿ ಅನೇಕ ರೈಲ್ವೆ ಯೋಜನೆಗಳು ಹಾಗೂ ರೈಲ್ವೆ ಪ್ರಯಾಣಕ್ಕೆ ದೊರೆಯಬೇಕಾದ ಕೆಲ ಸವಲತ್ತುಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು.

ಭದ್ರಾವತಿ-ಚಿಕ್ಕಜಾಜೂರು ಮಾರ್ಗದ ಸಮೀಕ್ಷೆ ನಡೆಸಬೇಕಿದೆ. ಹಿಂದೆ ತಾಳಗುಪ್ಪ-ಹೊನ್ನಾವರ ನೂತನ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆದಿದೆ. ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಇದನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ-ಬೀರೂರು ಡಬ್ಲಿಂಗ್ ಕಾರ್ಯ ಬೇಗ ಪೂರ್ಣಗೊಳಿಸಬೇಕು. ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನೂತನ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಕುಡಿಯುವ ನೀರು, ರೈಲುಗಳ ಸ್ವಚ್ಛತೆ ಮತ್ತಿತರ ಕಾರ್ಯಕ್ಕೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದರು.

ಪ್ರಸ್ತುತ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿರುವ ಗೂಡ್ಸ್ ಶೆಡ್ ಫ್ಲಾಟ್ ಫಾರಂ 4 ಮತ್ತು 5ಅನ್ನು ಮುಂದಿನ ದಿನಗಳಲ್ಲಿ ಕೋಟೆಗಂಗೂರಿಗೆ ಸ್ಥಳಾಂತರಿಸಬೇಕು. ನಿಲ್ದಾಣದ ಈ ಫ್ಲಾಟ್ ಫಾರಂಗಳನ್ನು ಪ್ರಯಾಣಿಕ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಹಾರನಹಳ್ಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂಅನ್ನು ಅಭಿವೃದ್ಧಿಪಡಿಸಬೇಕು. ಭದ್ರಾವತಿ ಮತ್ತು ಆನಂದಪುರ ರೈಲ್ವೆ ನಿಲ್ದಾಣಗಳನ್ನು ಗತಿಶಕ್ತಿ ಅಮೃತ್ ಭಾರತ್ 2ರಲ್ಲಿ ಕೈಗೆತ್ತಿಕೊಂಡು ಕೆಲಸ ಆರಂಭಿಸಬೇಕು. ಶಿಕಾರಿಪುರ-ರಾಣೆಬೆನ್ನೂರು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕು ಎಂದು ತಿಳಿಸಿದರು.

ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥುರ್, ಮುಖ್ಯ ಇಂಜಿನಿಯರ್ ಸಿ.ಎಂ.ಗುಪ್ತಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಶಾಂತ್, ವಿಭಾಗೀಯ ಜನರಲ್ ಮ್ಯಾನೇಜರ್ ಕುಲದೀಪ್, ಜಿಲ್ಲಾ ರೈಲ್ವೆ ಸಲಹಾ ಸಮಿತಿ ಸದಸ್ಯ ಪೀರ್ ಪಾಷಾ ಇತರರಿದ್ದರು.

ಬಿವೈಆರ್ ಸಲ್ಲಿಸಿದ ಬೇಡಿಕೆಗಳ ಪಟ್ಟಿ

* ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಗಾಡಿ ಸಂಖ್ಯೆ 20651 ಹಾಗೂ 20652, ಶಿವಮೊಗ್ಗ-ಯಶವಂತಪುರ ರೈಲು ಗಾಡಿ ಸಂಖ್ಯೆ 16579 ಹಾಗೂ 16580ಕ್ಕೆ ತಲಾ ಒಂದು ಹವಾನಿಯಂತ್ರಿತ ಬೋಗಿ ಅಳವಡಿಸಬೇಕು.

* ಶಿವಮೊಗ್ಗ-ಯಶವಂತಪುರ ರೈಲು ಗಾಡಿ ಸಂಖ್ಯೆ 16581 ಹಾಗೂ 16582 ವಾರದ 3 ದಿನ ಮಾತ್ರ ಸಂಚರಿಸುತ್ತಿದೆ. ಪ್ರತಿ ದಿನ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು.

* ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಗಾಡಿ ಸಂಖ್ಯೆ 20651 ಹಾಗೂ 20652ನ್ನು ಅರಸಾಳು ಮತ್ತು ಕುಂಸಿ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಮಾಡಬೇಕು.

* ಶಿವಮೊಗ್ಗ-ಹಾಸನ-ಮೈಸೂರಿಗೆ ಪ್ರತಿ ನಿತ್ಯ ರಾತ್ರಿ 11.30ಕ್ಕೆ ಒಂದು ಹೊಸ ರೈಲು ಸೇವೆ ಒದಗಿಸಬೇಕು.