ಬೆಂಗಳೂರು: ನರೇಗಾ ಯೋಜನೆಯಡಿ 5000 ಗೋಮಾಳ ಪ್ರದೇಶ, 50 ಸಾವಿರ ಎರಕೆ ಹುಲ್ಲುಗಾವಲು ಪ್ರದೇಶ, 2 ಲಕ್ಷ ಬರ ಪರಿಹಾರ ಕಾಮಗಾರಿ, 81 ಸಾವಿರ ಪ್ರವಾಹ ನಿಯಂತ್ರಣ ಕಾಮಗಾರಿ ಹಾಗೂ 4268 ಭೂ ಕುಸಿತ ತಡೆ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಸಜ್ಜಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 2023- 24 ನೇ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನದ ಕುರಿತ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
27,903 ಗ್ರಾಮಗಳಲ್ಲಿ ಸ್ಮಾಶಾನ ಭೂಮಿಯನ್ನು ಶಾಂತಿಧಾಮಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ, 5000 ಶಾಲಾ ಆವರಣಗಳನ್ನು ವಿದ್ಯಾಧಾಮಗಳನ್ನಾಗಿ ಉನ್ನತೀಕರಣ, 750 ಗ್ರಾಮ ಸಂತೆಗಳನ್ನು ಹಾಗೂ 27 ಸಾವಿರ ಕೊಳವೆಬಾವಿ ಪುನಶ್ಚೇತನ ಕಾಮಗಾರಿ ಅನುಷ್ಠಾನ ಗೊಳಿಸಲಾಗುವುದು ಎಂದು ಸಚಿವ ಪ್ರಿಯಾಂಕಾ ಖರ್ಗೆ ಸಭೆಯ ಗಮನಕ್ಕೆ ತಂದರು.
ವರುಣಾ ಕುಡಿಯುವ ನೀರಿನ ವರದಿ ಕೊಡಿ
ವರುಣಾ ಕ್ಷೇತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ? ಎಷ್ಟು ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿವೆ ಎಂದು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ವಾರಾಂತ್ಯದಲ್ಲಿ ಗ್ರಂಥಾಲಯ ತೆರೆಯಿರಿ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಾಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ ಸಂವಿಧಾನ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯ ಗಳನ್ನು ನೀಡಲಾಗುವ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಬೇಕು. ವಾರಾಂತ್ಯದಲ್ಲಿಯೂ ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.