ಶಿವಮೊಗ್ಗ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಜೆಜೆಎಂ (ಜಲಜೀವನ ಮಿಷನ್) ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಅದಕ್ಕೆ ಎದುರಾಗಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜೆಜೆಎಂ ಅನುಷ್ಠಾನ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಕೆಲ ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಸವಾಲು ಉಂಟಾಗಿದೆ. ಅರಣ್ಯ ಭೂಮಿ ಸಮಸ್ಯೆಯೂ ಇದೆ. ಹೀಗಾಗಿ ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸೂಕ್ತವಾದ ಸ್ಥಳಗಳನ್ನು ಗುರುತಿಸಬೇಕು. ಅರಣ್ಯಭೂಮಿಗೆ ಹೊಂದಿಕೊಂಡಂತಿರುವ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದಲ್ಲಿ ಅರಣ್ಯ ರಕ್ಷಕರು ಯೋಜನೆಯ ಅನುಷ್ಠಾನಕ್ಕೆ ಸೂಕ್ತ ಸಹಕಾರ ನೀಡಬೇಕು ಎಂದರು.
ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಸಹಕರಿಸಬೇಕು. ಕ್ಷುಲ್ಲಕ ಕಾರಣಕ್ಕಾಗಿ ಕಾಮಗಾರಿ ಸ್ಥಗಿತಗೊಳ್ಳದಂತೆ ಅಧಿಕಾರಿಗಳು ಗಮನಹರಿಸಬೇಕು. ಗ್ರಾಪಂ, ಕಂದಾಯ ಮತ್ತು ಅರಣ್ಯ ಇಲಾಖಾಧಿಕಾರಿಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು. ಯೋಜನೆ ಯಶಸ್ಸಿಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಹೇಳಿದರು.
ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ನಿಗದಿಪಡಿಸಿದ ಅವಧಿ ಮೀರಿ ಹೋಗುತ್ತಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ನಿರ್ಲಕ್ಷೃವಹಿಸುವ ಅಧಿಕಾರಿಗಳ ವರ್ತನೆ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದರು.
ಜಿಪಂ ಸಿಇಒ ಎನ್.ಹೇಮಂತ್, ಡಿಸಿಎಫ್ ಶಿವಶಂಕರ್, ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.