ಚಿಕ್ಕಮಗಳೂರು: ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೊಂಡಿರುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಿಳಿಸಿದರು.
1,600 ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರುಣಿಸುವ ಯೋಜನೆ ಮಳಲೂರು ಏತ ನೀರಾವರಿ ಯೋಜನೆ. 1998ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು 20 ವರ್ಷ ಕಳೆದರೂ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿದಿದೆ. ಇಂಟರ್‌ವೆಲ್, ಜಾಕ್‌ವೆಲ್, ರೈಸಿಂಗ್‌ಮೇನ್, ಪಂಪ್ ಮೋಟಾರ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿದರೆ ನೀರು ಹರಿಸಲಾಗುವುದು ಎಂದು ಇಂಜಿನಿಯರ್‌ಗಳು ಹೇಳುತ್ತಿದ್ದಾರೆ. ಆದರೆ ಸರ್ಕಾರಗಳು ಯಾಕೆ ಮೌನವಹಿಸುತ್ತಿವೆ ಎಂದು ಪ್ರಶ್ನಿಸಿದರು.
ಎರಡನೇ ಹಂತದ ಕಾಮಗಾರಿಗೆ ರೈತರ ಜಮೀನಿನಲ್ಲಿ ನಾಲೆ ನಿರ್ಮಿಸಲಾಗಿದೆ. ಕಾಮಗಾರಿಗಾಗಿ ಸ್ವಾಧೀನ ಜಮೀನಿನ ಮಾಲೀಕರಿಗೆ ಪರಿಹಾರ ಬಾಕಿ ಉಳಿಸಿಕೊಂಡಿದ್ದು ಕೂಡಲೇ ಬಿಡುಗಡೆ ಮಾಡಬೇಕು. ಹಳುವಳ್ಳಿ ಗ್ರಾಮದ ಅರಳಿಮರದಿಂದ ಬಾಣಾವರ, ಗಂಜಲಗೋಡು, ಮತ್ತಿಕೆರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬ ಹಾಳಾಗಿದ್ದು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಮಹೇಶ್, ಎಂ.ಬಿ.ಚಂದ್ರಶೇಖರ್, ಎಚ್.ಎಸ್.ಲೋಕೇಶ್, ಮಲ್ಲುಂಡಪ್ಪ, ಎಂ.ಸಿ.ಬಸವರಾಜ್, ಪರ್ವತೇಗೌಡ ಹಾಜರಿದ್ದರು.