ನ್ಯೂಸ್

ಇಂದು ವಿಕಲಚೇತನರ ದಿನ: ಘನತೆಯ ಬದುಕಿಗೆ ಪೂರಕ ಸೌಲಭ್ಯ

ಮೋಹನ್​ ಶೆಟ್ಟಿ

ಕರ್ನಾಟಕದ ವಿಕಲಚೇತನರು ಕ್ರೀಡೆ, ವಿಜ್ಞಾನ, ತಂತ್ರಜ್ಞಾನ... ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಕೂಡ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ವೃತ್ತಿಪರ ತರಬೇತಿ, ಉದ್ಯೋಗ, ಸಾಮಾಜಿಕ ಭದ್ರತೆ, ಸಮಾನ ಹಕ್ಕುಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸುತ್ತ ಬಂದಿದೆ.

ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 13.24 ಲಕ್ಷ ಅಂಗವಿಕಲರಿದ್ದಾರೆ. ಇವರ ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ವಿಕಲಚೇತನರಿಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗಾವಕಾಶ ಮತ್ತು ತರಬೇತಿ ಒದಗಿಸುವುದರ ಜತೆಗೆ ಅವಶ್ಯಕ ಸಾಧನ ಸಲಕರಣೆ ಪೂರೈಕೆ ಮಾಡುವ ಮೂಲಕ ಸಮಾಜದಲ್ಲಿ ಘನತೆ, ಗೌರವದಿಂದ ಬಾಳಲು ಪೂರಕ ವಾತಾವರಣ ಸೃಷ್ಟಿಸುತ್ತಿದೆ.

ಶೈಕ್ಷಣಿಕ, ಔದ್ಯೋಗಿಕ, ಪುನರ್ವಸತಿ, ಸಾಮಾಜಿಕ ಭದ್ರತೆಗಳನ್ನು ಆಧಾರವಾಗಿಟ್ಟುಕೊಂಡು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇವು ವಿಕಲಚೇತನರ ಅಭಿವೃದ್ಧಿಗೆ ಮೆಟ್ಟಿಲಾಗಿವೆ. ವಿಕಲಚೇತನ ಮಕ್ಕಳಿಗಾಗಿಯೇ ರಾಜ್ಯ ಸರ್ಕಾರ 5 ವೃತ್ತಿ ತರಬೇತಿ ಶಾಲೆಗಳನ್ನು ನಡೆಸುತ್ತಿದೆ. ಸ್ವಯಂಸೇವಾ ಸಂಸ್ಥೆಗಳ ಮೂಲಕ ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ 164 ಶಾಲೆ, ರಾಜ್ಯ ಅನುದಾನ ಸಂಹಿತ ಅಡಿ 33 ವಿಶೇಷ ಶಾಲೆ ನಡೆಯುತ್ತಿವೆ. ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ಉನ್ನತ ಶಿಕ್ಷಣಕ್ಕೆ ಶುಲ್ಕ ಮರುಪಾವತಿಯಂಥ ಸೌಲಭ್ಯ ಕಲ್ಪಿಸಿದೆ. ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂ. ಘಟಕ ವೆಚ್ಚಕ್ಕೆ ತಲಾ 50 ಸಾವಿರ ರೂ. ಸಬ್ಸಿಡಿ ಜತೆಗೆ 50 ಸಾವಿರ ರೂ. ಬ್ಯಾಂಕ್ ಮೂಲಕ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ. ಉದ್ಯೋಗಸ್ಥ ವಿಕಲಚೇತನ ಮಹಿಳೆಯರಿಗೆ 25 ರ್ವಂಗ್ ವುಮನ್ ಹಾಸ್ಟೆಲ್ ಕಲ್ಪಿಸಲಾಗಿದೆ. ಪುನರ್ವಸತಿ ಯೋಜನೆಯಡಿ ಮಹಿಳೆಯರಿಗೆ ಅನುಪಾಲನಾ ಗೃಹ, 25 ವರ್ಷ ಮೇಲ್ಪಟ್ಟ ನಿರ್ಗತಿಕ ಬುದ್ಧಿಮಾಂದ್ಯ ಪುರುಷರಿಗೆ ಸಮಾಜಸೇವಾ ಸಂಕೀರ್ಣ, ಮಾನಸಿಕ ಅಸ್ವಸ್ಥರಿಗೆ ಮಾನಸ ಕೇಂದ್ರಗಳನ್ನು ತೆರೆಯಲಾಗಿದೆ.

ಆರೈಕೆ ಭತ್ಯೆ

ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳು ಐದು ವರ್ಷ ಪೂರೈಸುವವರೆಗೆ ಅವರನ್ನು ಆರೈಕೆ ಮಾಡಲು ಆಯಾ ಸೇವೆ, ಆರೋಗ್ಯ ಪಾಲನೆ, ಪೌಷ್ಠಿಕ ಆಹಾರ, ಔಷಧಕ್ಕೆ ತಿಂಗಳಿಗೆ 2 ಸಾವಿರ ರೂ.ಗಳಂತೆ 5 ವರ್ಷಗಳವರೆಗೆ ಸಹಾಯಧನ ನೀಡಲಾಗುತ್ತದೆ. ಸೆರಬ್ರೆಲ್ ಪಾಲ್ಸಿ, ಮಸ್ಕೂಲರ್ ಡಿಸೊ್ಟ್ರೕಫಿ, ರ್ಪಾನ್ಸನ್, ಮಲ್ಟಿಪಲ್ ಸ್ಲೆರೋಸಿಸ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆರೈಕೆ ಮಾಡುತ್ತಿರುವವರಿಗೆ ತಿಂಗಳಿಗೆ 1 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆಯನ್ನು 2024-25ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ https://www.swavlambancard.gov.in/

ಗ್ರಾಮೀಣ ಪುನರ್ವಸತಿ ಯೋಜನೆ

ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಹತೆಯುಳ್ಳ ಸಮರ್ಥ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ಹಾಗೂ ತಾಲೂಕು ಮಟ್ಟದಲ್ಲಿ ಪದವೀಧರ ವಿಕಲಚೇತನರೊಬ್ಬರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರೆಂದು, ಸ್ಥಳೀಯ ನಗರ ಪ್ರದೇಶದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರೆಂದು, 3 ಜಿಲ್ಲೆಗಳಿಗೆ ಒಬ್ಬರಂತೆ ಜಿಲ್ಲಾ ಪುನರ್ವಸತಿ ಕಾರ್ಯಕರ್ತರು ಮತ್ತು ನಿರ್ದೇಶನಾಲಯದಲ್ಲಿ ರಾಜ್ಯ ಸಂಯೋಜಕರನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಾಹೆ 9 ಸಾವಿರ ರೂ., ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ 15 ಸಾವಿರ ರೂ. ಜಿಲ್ಲಾ ಪುನರ್ವಸತಿ ಕಾರ್ಯಕರ್ತರಿಗೆ 19 ಸಾವಿರ ರೂ. ಹಾಗೂ ರಾಜ್ಯ ಸಂಯೋಜಕರಿಗೆ 38 ಸಾವಿರ ರೂ. ಗೌರವಧನ ನೀಡಲಾಗುತ್ತದೆ.

  • ಎಸ್ಸೆಸ್ಸೆಲ್ಸಿ ನಂತರದ ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್​ಟಾಪ್ ನೀಡುತ್ತಿದ್ದು, ಈವರೆಗೆ 374 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.
  • ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆಯಡಿ 2019-20ನೇ ಸಾಲಿನಿಂದ ಈವರೆಗೆ 1566 ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲಾಗಿದೆ.
  • ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೖೆಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತಿತರ ಸಾಧನ ಒಳಗೊಂಡ ತಲಾ 25 ಸಾವಿರ ರೂ. ಬೆಲೆಯ ಬ್ರೖೆಲ್ ಕಿಟ್ ನೀಡಲಾಗುತ್ತಿದೆ.
  • 2023-24ನೇ ಸಾಲಿನಿಂದ ಬ್ಯಾಟರಿ ಚಾಲಿತ ವ್ಹೀಲ್​ಚೇರ್ ವಿತರಿಸಲಾಗುತ್ತಿದೆ.

ಗುರುತಿನ ಚೀಟಿ

ವಿಕಲಚೇತನರಿಗೆ ಗುರುತಿನ ಚೀಟಿ ನೀಡುತ್ತಿದ್ದು, ಈ ಗುರುತಿನ ಚೀಟಿಯನ್ನು ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಉಪಯೋಗಿಸಿ ಕೊಳ್ಳಬಹುದಾಗಿದೆ. ಈವರೆಗೆ 8,03,975 ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ನೀಡಲಾಗಿದೆ.

ಮಾಹಿತಿ ಕೇಂದ್ರ

ವಿಕಲಚೇತನರಿಗೆ ಲಭ್ಯವಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು, ವಿಶೇಷ ಶಾಲೆಗಳು ಹಾಗೂ ವೃತ್ತಿ ತರಬೇತಿ ಸಂಸ್ಥೆಗಳ ಬಗ್ಗೆ ಮಾಹಿತಿ ಒದಗಿಸಲು ನಿರ್ದೇಶನಾಲಯ ಹಾಗೂ ರಾಜ್ಯದ 30 ಜಿಲ್ಲೆಗಳಲ್ಲಿ ವಿಕಲಚೇತನರ ಸಹಾಯವಾಣಿ/ಮಾಹಿತಿ ಕೇಂದ್ರ ನಡೆಸಲಾಗುತ್ತಿದೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು

ಅಂಗವೈಕಲ್ಯ ಮೆಟ್ಟಿನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು, ವಿಶೇಷ ಶಿಕ್ಷಕರು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.