ನ್ಯೂಸ್

ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಎಸ್‌ಪಿಗೆ ದೂರು

ತುಮಕೂರು: ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ದೂರು ದಾಖಲಾಗಿದ್ದರೂ ಕ್ರಮಕೈಗೊಳ್ಳದೆ ಪೊಲೀಸರು ವಿಳಂಬನೀತಿ ಅನುಸರಿಸುತ್ತಿದ್ದು ಶೀಘ್ರ ತನಿಖೆ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಾಮಾಜಿಕ ಕಾರ್ಯಕರ್ತ ಬೆಳಗುಂಬ ವೆಂಕಟೇಶ್ ಮನವಿ ಸಲ್ಲಿಸಿದರು.

ಎಸ್ಪಿ ಕಚೇರಿಯಲ್ಲಿ ಶನಿವಾರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್ ಅವರನ್ನು ಭೇಟಿ ಮಾಡಿದ ಬೆಳಗುಂಬ ವೆಂಕಟೇಶ್, ಸೋರೆಕುಂಟೆ ಗ್ರಾಮದ ಸ.ನಂ.41ರ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದಾಗ ಸರ್ಕಾರದ ಹಣ ಪಡೆಯುವ ಸಲುವಾಗಿ ಹಂಚಿಕೆ ಮಾಡಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈವರೆಗೆ ಕ್ರಮ ಜರುಗಿಸಿಲ್ಲ. ಕೂಡಲೇ ಮಾಜಿ ಶಾಸಕರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕೆಐಎಡಿಬಿ ವತಿಯಿಂದ ಹಣ ಪಡೆಯುವ ಸಲುವಾಗಿ ಜಮೀನು ಮಂಜೂರು ಮಾಡಿರುವ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ನ್ಯಾಯಾಲಯ ಗ್ರಾಮಾಂತರ ಠಾಣೆಗೆ ವಿಚಾರಣೆ ಮಾಡಲು ನಿರ್ದೇಶಿಸಿತ್ತು. ಆದರೆ, ಠಾಣಾಧಿಕಾರಿಗಳು ಪ್ರಕರಣ ದಾಖಲಿಸಲು ವಿಳಂಬ ಮಾಡಿದರು. ಬಳಿಕ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದು ಅವರ ನಿರ್ದೇಶನದಂತೆ ಪ್ರಕಣರವನ್ನು ಸಿಆರ್93/ 2021 ಆಗಿ ದಾಖಲಿಸಿಕೊಂಡರಾದರೂ ಕಾನೂನು ನಿಯಮಗಳನ್ನು ಪಾಲಿಸುವಲ್ಲಿ ಠಾಣಾಧಿಕಾರಿಗಳು ಪುನಃ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಸುರೇಶ್‌ಗೌಡ ಮೇಲೆ ಗಂಭೀರ ಆರೋಪದಲ್ಲಿ ಕೇಸ್ ದಾಖಲಾಗಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಮತ್ತು ತನಿಖೆ ನಡೆಸುತ್ತಿಲ್ಲ. ಶೀಘ್ರ ತನಿಖೆ ಆರಂಭಿಸುವ ಭರವಸೆ ಇದೆ. ಒಂದು ವೇಳೆ ವಿಳಂಬ ಮಾಡಿದರೆ ಸಮಾನ ಮನಸ್ಕರು ಸೇರಿ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ. ಬೆಳಗುಂಬ ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ