ನ್ಯೂಸ್

ಆರಗ ವಿರುದ್ಧ ಸ್ಪೀಕರ್‌ಗೆ ದೂರು, ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಹೇಳಿಕೆ ನೀಡಿದ ಆರಗ ಜ್ಞಾನೇಂದ್ರ ಕ್ಷಮೆ ಕೇಳಿ ಉಪಯೋಗವಿಲ್ಲ, ಅವರಿಂದ ರಾಜಿನಾಮೆ ಪಡೆಯಬೇಕು. ಖರ್ಗೆಯವರ ಹಾಗೂ ಈಶ್ವರ ಖಂಡ್ರೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವದರ ಜತೆಗೆ ಬಣ್ಣವೂ ಸೇರಿಕೊಂಡಿದೆ, ಇದಕ್ಕಿಂತ ದೊಡ್ಡ ಅಪರಾಧ ಇನ್ನಿಲ್ಲ. ಮನುಷ್ಯನ ಬಣ್ಣದ ಬಗ್ಗೆ ಮಾತನಾಡಿರುವುದು ಘೋರ ಅಪರಾಧ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಚಿವರಾಗಿ, ಎಂಪಿಎಂ ಅಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಆರಗ ಜ್ಞಾನೇಂದ್ರ ಅವರು ನಿಭಾಯಿಸಿದ್ದಾರೆ. ಇಂತಹ ವ್ಯಕ್ತಿ ಬಾಯಿ ತಪ್ಪಿನಿಂದ ಹೇಳಿದೆ, ಕಣ್ತಪ್ಪಿನಿಂದ ಹೇಳಿದೆ ಎನ್ನುವ ವಯಸ್ಸು ಅಲ್ಲ ಜ್ಞಾನವೂ ಅಲ್ಲ ಎಂದು ಹೇಳಿದರು.

ಆರಗ ಅವರು ನಾನು ಖರ್ಗೆಯವರ ಹೆಸರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸ್ಪೀಕರ್‌ಗೆ ದೂರು ಸಲ್ಲಿಸಲಾಗುವುದು, ಕೋರ್ಟಿಗೂ ಹೋಗಲಾಗುವುದು. ಖರ್ಗೆಯವರ ವಿಚಾರದಲ್ಲಿ ಕೇವಲ ವಿಷಾದ ವ್ಯಕ್ತಪಡಿಸುವುದು ಬೇಕಿಲ್ಲ, ನೇರವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬೃಹತ್ ಪತ್ರಿಭಟನೆ ಹಾಗೂ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಕಳಂಕ, ಕುವೆಂಪು ಅವರು, ಅನಂತಮೂರ್ತಿ, ಗೋಪಾಲಗೌಡರು, ಬದ್ರಿನಾರಾಯಣ್ ಅವರಂತಹ ಸಂಸದೀಯ ಪಟುಗಳು ಗೆದ್ದುಬಂದಂತಹ ಕ್ಷೇತ್ರ ಇಂತಹ ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.