ನ್ಯೂಸ್

ಲೋಕಾಯುಕ್ತಕ್ಕೆ ಸ್ಮಾರ್ಟ್ ಮೀಟರ್ ಹಗರಣದ ದೂರು: ಡಾ.ಸಿ.ಎನ್.ಅಶ್ವತ್ಥ ನಾರಾಯಣ | Contract awarded to blacklisted company

ಬೆಂಗಳೂರು: ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ಒಪ್ಪಂದದಲ್ಲಿ ಬಹು ಕೋಟಿ ರೂ.ಗಳ ಅವ್ಯವಹಾರದ ತನಿಖೆ ಕೋರಿ ಲೋಕಾಯುಕ್ತಕ್ಕೆ ಪ್ರತಿಪಕ್ಷ ಬಿಜೆಪಿ ಸೋಮವಾರ ದೂರು ಸಲ್ಲಿಸಿದ್ದು, ಈ ಅಕ್ರಮವನ್ನು ಮುಚ್ಚಿಹಾಕಲು ಇಂಧನ ಸಚಿವರು ಒಂಭತ್ತು ಸುಳ್ಳುಗಳನ್ನು ಹೇಳಿದ್ದಾರೆ ಎಂದೂ ತಿಳಿಸಿದೆ.

ಲೋಕಾಯುಕ್ತ ಎಸ್‌ಪಿಗೆ ದೂರು ಸಲ್ಲಿಸಿದ ನಂತರ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಸ್ಮಾರ್ಟ್ ಮೀಟರ್ ಗುತ್ತಿಗೆ ನೀಡಲಾಗಿದೆ. ಕೇಂದ್ರದ ಇಂಧನ, ಆರ್ಥಿಕ ಇಲಾಖೆ ಮಾರ್ಗಸೂಚಿ, ಆದೇಶಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.

ಬೇನಾಮಿ ವ್ಯವಹಾರ, ಅಧಿಕಾರ ದುರ್ಬಳಕೆಯಾಗಿದೆ. ಕಾನೂನುಬಾಹಿರವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡುತ್ತಿದ್ದಾರೆ. ಗುತ್ತಿಗೆ ಒಪ್ಪಂದದ ಲೋಪಗಳನ್ನು ದಾಖಲೆ, ಪುರಾವೆ ಸಹಿತ ಬಹಿರಂಗಪಡಿಸಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ತಾರ್ಕಿಕ ಅಂತ್ಯ ಕಾಣಿಸಲಿದ್ದೇವೆ.

ಹಗರಣದ ತನಿಖೆ ಕೋರಿಯೇ ಲೋಕಾಯಕ್ತರಿಗೆ ದೂರು ಸಲ್ಲಿಸಿದ್ದೇವೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಂತೇಶ್, ತಾಂತ್ರಿಕ ನಿರ್ದೇಶಕ ರಮೇಶ್, ಬಾಲಾಜಿ ಮತ್ತಿತರರ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.