ನ್ಯೂಸ್

ಸಚಿವ ಬೈರತಿ, ಪೊಲೀಸ್ ಅಧಿಕಾರಿ ಸುಜೀತ್ ವಿರುದ್ಧ ಡಿಜಿಗೆ ದೂರು

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮೈಸೂರು ಲೋಕಾಯುಕ್ತ ಹಿಂದಿನ ಎಸ್.ಪಿ ಸುಜೀತ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸೋಮವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದು ಕೆಲವು ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದು, ಇದಕ್ಕೆ ಮೈಸೂರು ಸುಜೀತ್ ನೆರವಾಗಿದ್ದರು ಎಂದು ಆರೋಪಿಸಿದ್ದಾರೆ.
ಸುಜೀತ್ ಅವರು ಲೋಕಾಯುಕ್ತದ ಸರ್ಚ್ ವಾರೆಂಟ್ ಆಧರಿಸಿ ಜು.೨೬ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ವೇಳೆ ಯಾವುದೇ ದಾಖಲೆಗಳನ್ನು ವಶಪಡಿಸಿಕೊಳ್ಳದೆ ಬೈರತಿ ಸುರೇಶ್‌ಗೆ ಮಾಹಿತಿ ನೀಡಿದ್ದರು. ಬಳಿಕ ಸಚಿವರು ಹೆಲಿಕಾಪ್ಟರ್ ಮುಖಾಂತರ ಮೈಸೂರಿಗೆ ಬಂದು ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಚಿವರಿಗೆ ಮಾಹಿತಿ ನೀಡಿದ ಎಸ್ಪಿ :
ನನಗೆ ದೊರೆತಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇತರೆ ಪ್ರಭಾವಿಗಳು ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿರು ಬಗ್ಗೆ ಲೋಕಾಯುಕ್ತ ಅಧಿಕಾರಿಗಳು, ಲೋಕಾಯುಕ್ತರಿಗೆ ದಾಖಲೆಗಳೊಂದಿಗೆ ಸಮಗ್ರ ವರದಿ ನೀಡಿ ಸರ್ಚ್ ವಾರೆಂಟ್ ಪಡೆದಿದ್ದರು. ಅದರಂತೆ ಕಳೆದ ಜು.೨೬ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳುವ ಯೋಜನೆ ಮಾಡಲಾಗಿತ್ತು. ಆ ಸಮಯದಲ್ಲಿ ಮೈಸೂರು ಲೋಕಾಯುಕ್ತದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸುಜೀತ್ ಅವರು ಈ ದಾಳಿ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ಮಾಹಿತಿ ನೀಡಿದ್ದರು. ಹೀಗಾಗಿ ಸಚಿವರು ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದು ಕೆಲವು ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕಡತಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ರೀತಿಯ ಸಹಾಯ ಮಾಡಿದ್ದಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಸುಜೀತ್ ಅವರನ್ನು ಬೆಂಗಳೂರಿನ ಆಯಾಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.