ಕೋಲಾರ ನಗರಸಭೆಯಲ್ಲಿ ನಿತ್ಯ ಓಡಾಡುತ್ತಿದ್ದ ವ್ಯಕ್ತಿಗಳನ್ನು ವಿಚಾರಿಸುತ್ತಿರುವ ಪೌರಾಯುಕ್ತ ಶಿವಾನಂದ. 
ನ್ಯೂಸ್

ದಲ್ಲಾಳಿಗಳ ಮಾಹಿತಿ ನೀಡಿದರೆ ದೂರು

ಕಿರುವಾರ ಎಸ್.ಸುದರ್ಶನ್

ಕೋಲಾರ: ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದ ಸದಸ್ಯರು, ಮಂಗಳವಾರ ಪೌರಾಯುಕ್ತ ಶಿವಾನಂದ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಅಧಿಕಾರಿಗಳು, ಸಿಬ್ಬಂದಿ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಹೆಸರಿಗಷ್ಟೆ ನಗರಸಭೆಯಿದೆ, ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಅರ್ಜಿ ವಿಲೇವಾರಿಯಾಗುತ್ತದೆ ಎಂದು ಸದಸ್ಯರಾದ ಮುರಳಿಗೌಡ, ಪ್ರವಿಣ್​ ಗೌಡ ಆರೋಪಿಸಿದರು.
ಈ ವೇಳೆ ಕುಪಿತಗೊಂಡ ಪೌರಾಯುಕ್ತ ಶಿವಾನಂದ, ಕಚೇರಿಯ ಯಾವುದೇ ವಿಭಾಗದಲ್ಲಿ ದಲ್ಲಾಳಿಯನ್ನು ತೋರಿಸಿದರೆ ಕೂಡಲೇ ಅವರ ವಿರುದ್ಧ ದೂರು ದಾಖಲಿಸುತ್ತೆನೆ ಎಂದು ಸದಸ್ಯರೊಡನೆ ಜನನ&ಮರಣ ವಿಭಾಗ, ಕಂದಾಯ ವಿಭಾಗದ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.

ಜನನ-ಮರಣ ವಿಭಾಗದಲ್ಲಿ ಪ್ರತಿದಿನ ಒಡಾಡುತ್ತಿದ್ದ ಎಜಾಜ್​ಪಾಷಾ ಎಂಬುವವರನ್ನು ವಿಚಾರಿಸಿದಾಗ ಪ್ರಮಾಣ ಪತ್ರ ತೆಗೆದುಕೊಳ್ಳಲು ಬಂದಿದ್ದೇನೆ ಎಂದರು. ಆಗ ವಿಭಾಗದ ಸಿಬ್ಬಂದಿಯನ್ನು ವಿಚಾರಿಸಿದಾಗ ದಿನಕ್ಕೆ ನಾಲ್ಕೆದು ಬಾರಿ ಬರುತ್ತಾರೆ ಎಂದು ಗಮನಕ್ಕೆ ತಂದರು. ಆ ವ್ಯಕ್ತಿಯ ೋಟೋ ಹಿಡಿದುಕೊಳ್ಳಿ ಪೊಲೀಸರಿಗೆ ದೂರು ನೀಡಬೇಕು ಎಂದು ಪೌರಾಯುಕ್ತ ಸೂಚಿಸಿದರು.
ನನ್ನ ಬಳಿಗೆ ಯಾರೇ ಬಂದು ಸಮಸ್ಯೆ ಹೇಳಿಕೊಂಡರೂ ಕೂಡಲೇ ಪರಿಹಾರ ಕಲ್ಪಿಸಲಾಗುವುದು. ದಲ್ಲಾಳಿಗಳು ಯಾರು ಇಲ್ಲ, ಸದಸ್ಯರು ಅಪಾರ್ಥ ಮಾಡಿಕೊಳ್ಳಬಾರದು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪೌರಾಯುಕ್ತರು ಮನವಿ ಮಾಡಿದರು.
ಯಾರೇ ದಲ್ಲಾಳಿಗಳು ಬಂದು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಂಡರೆ ಅಂತಹ ಆದೇಶ, ಪ್ರಮಾಣ ಪತ್ರಗಳನ್ನು ರದ್ದುಗೊಳಿಸಲಾಗುವುದು. ದಲ್ಲಾಳಿಗೆ ವಾರದಿಂದ ಎಷ್ಟು ಜನನ&ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂಬುದನ್ನು ಮಾಹಿತಿ ಕೊಡಿಸಿ, ಕೂಡಲೇ ರದ್ದುಗೊಳಿಸುತ್ತೇನೆ ಎಂದರು.

  • ಲಂಚ ಕೊಡದಿದ್ದರೆ ಕೆಲಸ ಆಗಲ್ಲ
    ನಗರಸಭೆಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಜನರ ಸಮಸ್ಯೆ ಬಗ್ಗೆ ಗಂಭೀರತೆಯಿಲ್ಲ. ಯಾವುದೇ ವಿಭಾಗಕ್ಕೆ ಅರ್ಜಿ ಸಲ್ಲಿಸಿದರೂ ಲಂಚ ಕೊಡದಿದ್ದರೆ ಕೆಲಸ ಆಗುವುದಿಲ್ಲ ಎಂದು ಜನ ಅಳಲು ತೋಡಿಕೊಂಡಿದ್ದಾರೆ ಎಂದು ಸದಸ್ಯ ಪ್ರವಿಣ್​ಗೌಡ ಅಸಮಾಧಾನವ್ಯಕ್ತಪಡಿಸಿದರು. ಸಿಬ್ಬಂದಿಯನ್ನು ಕೇಳೋಣ ಎಂದರೆ ಯಾರೂ ಸಹ ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುವುದಿಲ್ಲ. ಇನ್ನು ಇಂಜಿನಿಯರ್​ ವಿಭಾಗ ಇದ್ದೂ ಇಲ್ಲದಂತಾಗಿದೆ. ದುಡ್ಡು ಕೊಟ್ಟವರ ಕಡತಗಳನ್ನು ದಲ್ಲಾಳಿಗಳು ತಂದು ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಬೇಕಾದರೆ ವಿವಿಧ ವಿಭಾಗಗಳಿಗೆ ದಿಢೀರನೆ ಭೇಟಿ ನೀಡಿ ಸತ್ಯ ಗೊತ್ತಾಗುತ್ತದೆ ಎಂದರು.
  • ಕಡತಕ್ಕೆ ರೇಟ್​ ಫಿಕ್ಸ್​
    ನಗರ ಭಾಗದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಆಸ್ತಿ ಖಾತೆ ಮಾಡಿಕೊಡಲು ರೇಟ್​ಕಾರ್ಡ್​ ಫೀಕ್ಸ್​ ಮಾಡಿಕೊಂಡಿದ್ದಾರೆ. ಸಾಮಾನ್ಯ ಜನ ಕಚೇರಿಗೆ ಅಲೆದು ಅಲೆದು ಚಪ್ಪಲಿ ಸವೆದರೂ ಕೆಲಸಗಳು ಆಗುವುದಿಲ್ಲ. ಆಡಳಿತಾಧಿಕಾರಿ ನೇಮಕವಾದ ನಂತರವಂತು ಸಮಸ್ಯೆ ಹೇಳಿಕೊಳ್ಳಲಾಗುತ್ತಿಲ್ಲ ಎಂದು ಪ್ರವಿಣ್​ಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿಗೆ ಬಂದರೆ ಅಧಿಕಾರಿಗಳು ಯಾರು?, ಸಿಬ್ಬಂದಿ ಯಾರು? ಎಂಬುದು ಗೊತ್ತಾಗುವುದಿಲ್ಲ, ದಲ್ಲಾಳಿಗಳ ಹಾವಳಿಯೇ ಹೆಚ್ಚು. ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕಾದವರೆ ಕಚೇರಿಯಲ್ಲಿ ಲಭ್ಯವಾಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
  • ಖಾಸಗಿ ವ್ಯಕ್ತಿಗಳಿಂದ ಕಂಪ್ಯೂಟರ್​ ಆಪರೇಟ್​
    ನಗರಸಭೆ ಮೇಲೆ ಜನರಿಗೆ ವಿಶ್ವಾಸವಿಲ್ಲದಂತಾಗಿದೆ. ಇಲ್ಲಿನ ಆಡಳಿತ ಜಿಡ್ಡುಗಟ್ಟಿದ್ದು ಹೇಳೊರು… ಕೇಳೊರು.. ಯಾರು ಇಲ್ಲದಂತಾಗಿದೆ ಎಂದು ಸದಸ್ಯ ಎಸ್​.ಆರ್​.ಮುರಳಿಗೌಡ ಕಿಡಿಕಾರಿದರು. ವಾರ್ಡ್​ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸಾರ್ವಜನಿಕರು ಖಾಸಗಿ ಟ್ಯಾಂಕರ್​ಗಳ ಮೋರೆ ಹೋಗಿದ್ದಾರೆ. ಕೆಟ್ಟ ಪಂಪು ಮೋಟಾರು ರಿಪೇರಿ ಮಾಡಿಸಲು ಇಂಜಿನಿಯರ್​ಗಳು ರ್ನಿಲಕ್ಷ$್ಯ ತೋರುತ್ತಾರೆ. ಖಾತೆ ಸೆಕ್ಷನ್​ ಬಗ್ಗೆ ಹೇಳುವುದೇ ಬೇಡ, ಸಿಬ್ಬಂದಿ ಅಲ್ಲದವರು ಸಹ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಖಾಸಗಿ ಹೋಟೆಲ್​ನಲ್ಲಿ ವ್ಯವಹಾರ ಕುದರಿದ ಮೇಲೆ ಕಡತ ವಿಲೇವಾರಿಯಾಗುತ್ತದೆ. ಈ ಮಾತ್ರಕ್ಕೆ ನಗರಸಭೆ ಸದಸ್ಯರು, ಸಾರ್ವಜನಿಕರು ಕಚೇರಿಗೆ ಏಕೆ ಬರಬೇಕು ಎಂದು ಪ್ರಶ್ನಿಸಿದರು.
  • ಅಧಿಕಾರಿಯ ಅರ್ಜಿಯೇ ವಿಲೇ ಆಗಿಲ್ಲ!
    ನಾನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಮ್ಮ ನಿವೇಶನ ಇ&ಆಸ್ತಿ ದಾಖಲೆಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಿ 7 ತಿಂಗಳು ಕಳೆದಿದೆ. ಕೇಸ್​ವರ್ಕರ್​ ಪೆಂಡಿಂಗ್​ ಇಟ್ಟುಕೊಂಡಿದ್ದಾರೆ. ಕೇಳಿದರೆ ದಾಖಲೆಗಳ ಕೊರತೆಯಿದೆ, ಸಂಪೂರ್ಣ ದಾಖಲೆಗಳನ್ನು ತಂದು ಕೊಡಿ ಎನ್ನುತ್ತಾರೆ ಎಂದು ಅಧಿಕಾರಿಯೊಬ್ಬರು ಅಳಲು ತೊಡಿಕೊಂಡರು.
    ನಾನು ನಗರಸಭೆಯ ಅಧಿಕಾರಿಯಾಗಿದ್ದು, ಇ-ಖಾತೆಗೆ ಏನು ಏನು ದಾಖಲೆಗಳು ಬೇಕು ಎಂಬುದು ಅರಿವಿದೆ. ತೆರಿಗೆ ಪಾವತಿ ಮಾಡಿ ಇ&ಖಾತೆಗೆ ಬೇಕಾದ ದಾಖಲೆ ಸಲ್ಲಿಸಲಾಗಿದೆ. ಅಧಿಕಾರಿ, ಸಿಬ್ಬಂದಿ ಕೆಲಸಗಳೇ ಇಷ್ಟೊಂದು ವಿಳಂಬವಾದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಬೇಸರಿಸಿದರು.