ನ್ಯೂಸ್

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ದೂರು

ಮಂಜುನಾಥ.ಕೆ

ಬೆಂಗಳೂರು: ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಇತ್ತೀಚೆಗೆ ಯುವತಿ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಲೋಕೇಶ್‌ಗೌಡ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತ ಯುವತಿಯು ಲೋಕೇಶ್‌ಗೌಡ ವಿರುದ್ಧ ದೂರು ಕೊಟ್ಟಿದ್ದು, ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆಯ ಪ್ರಕರಣ ದಾಖಲಿಸಿದ್ದಾರೆ.

ಲೋಕೇಶ್‌ಗೌಡ ಅವರು ನನ್ನ ಒಪ್ಪಿಗೆಯಿಲ್ಲದೆ ತಮ್ಮ ೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಘನತೆಗೆ ಧಕ್ಕೆ ತಂದಿದ್ದಾರೆ. ನನ್ನ ಮೇಲೆ ನಡೆದ ಲೈಂಗಿಕ ಕಿರುಕುಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ಅವಮಾನಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಸಂತ್ರಸ್ತ ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಲೋಕೇಶ್‌ಗೌಡ ವಿರುದ್ಧ ದಾಖಲಿಸಿರುವ ಪ್ರಕರಣವು ಠಾಣೆ ಹಂತದಲ್ಲೇ ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಹೀಗಾಗಿ, ಈವರೆಗೆ ಅವರನ್ನು ಬಂಧಿಸಿಲ್ಲ. ವಿಚಾರಣೆಗೆ ಬರುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ಸಂತ್ರಸ್ತ ಯುವತಿಯು ಭಾರತಿ ಲೇಔಟ್‌ನ ೧ನೇ ಅಡ್ಡರಸ್ತೆಯಲ್ಲಿ ಏ.೩ರಂದು ತಡರಾತ್ರಿ ಸ್ನೇಹಿತೆಯ ಜತೆ ನಡೆದು ಹೋಗುತ್ತಿದ್ದಾಗ ಆರೋಪಿ ಸಂತೋಷ್ ಡೇನಿಯಲ್ ಎಂಬಾತ ಅವರನ್ನು ಸುಮಾರು ೫೦ ಮೀಟರ್ ಹಿಂಬಾಲಿಸಿದ್ದ. ನಂತರ ಏಕಾಏಕಿ ಸಂತ್ರಸ್ತ ಯುವತಿಯನ್ನು ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ್ದ. ಈ ದೃಶ್ಯವು ಘಟನಾ ಸ್ಥಳದ ಬಳಿಯ ಲೋಕೇಶ್‌ಗೌಡ ಅವರ ಕಟ್ಟಡದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊವನ್ನು ಲೋಕೇಶ್‌ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಮತ್ತು ಅಲ್ಲದೇ ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ಕೊಟ್ಟಿದ್ದರು. ಆರೋಪಿಯ ಪತ್ತೆಗಾಗಿ ರಚಿಸಿದ್ದ ವಿಶೇಷ ತಂಡ ಸಂತೋಷ್ ಡೇನಿಯಲ್‌ನನ್ನು ಕೇರಳದಲ್ಲಿ ಬಂಧಿಸಿದ್ದರು.