ಬಿಹಾರ ಮತ್ತು ಹರಿಯಾಣದಲ್ಲಿ ಭಾರೀ ಪ್ರಮಾಣದ ಮದ್ದುಗುಂಡು ವಶ ಪ್ರಕರಣದಲ್ಲಿ RSS ನಂಟು ಕಲ್ಪಿಸಿ ಪೋಸ್ಟ್.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ತೇಜಸ್ ಎ. ಗೌಡ ಎಂಬುವವರಿಂದ ದೂರು ದಾಖಲು.
ಸುಳ್ಳು ಸುದ್ದಿ ಹರಡಿ, ಸಮಾಜದಲ್ಲಿ ಅಶಾಂತಿ ತರಲು ಯತ್ನಿಸುತ್ತಿದ್ದಾರೆ ಎಂದು ಉಲ್ಲೇಖ.
ಬೆಂಗಳೂರು: ಎಕ್ಸ್ನಲ್ಲಿ ಎಐ ಎಡಿಟ್ ಫೋಟೋ ಹಂಚಿಕೊಳ್ಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವು ದಿನದ ಹಿಂದೆ ಬಿಹಾರ ಮತ್ತು ಹರಿಯಾಣದಲ್ಲಿ ನಡೆದ ಭಾರೀ ಪ್ರಮಾಣದ ಮದ್ದುಗುಂಡು ವಶ ಪ್ರಕರಣದಲ್ಲಿ ಆರ್ಎಸ್ಎಸ್ ನಂಟಿನ ಬಗ್ಗೆ ಪ್ರಶ್ನಿಸಿ ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವರು ಸುಳ್ಳು ಸುದ್ದಿ ಹರಡುವ ಮೂಲಕ ರಾಜ್ಯದಲ್ಲಿ ಸಮಾಜದಲ್ಲಿ ಅಶಾಂತಿ ತರಲು ಯತ್ನಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಪೋಸ್ಟ್ ವಿರುದ್ಧ ತೇಜಸ್ ಎ ಗೌಡ ಎಂಬುವವರು ಮಂಗಳವಾರ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಚಿವರು ಉದ್ದೇಶಪೂರ್ವಕವಾಗಿ ಈ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಆರ್ಎಸ್ಎಸ್ ಸಮವಸ್ತ್ರದಲ್ಲಿ ನಾಲ್ಕೈದು ಮಂದಿ ಇದ್ದು, ಅದರಲ್ಲಿ ಒಬ್ಬರು ಮಾತ್ರ ಆರ್ಎಸ್ಎಸ್ ಸಮವಸ್ತ್ರದಲ್ಲಿದ್ದರೆ, ಎಡಿಟ್ ಮಾಡಿದ ಚಿತ್ರದಲ್ಲಿ ಇತರರನ್ನೂ ಅದೇ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.
ನ.10ರಂದು ಕಾರ್ಟ್ರಿಡ್ಜ್ ವಶ ಪ್ರಕರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಅಂತರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಕೆಲವರು ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಬಗ್ಗೆ ವರದಿಗಳು ಮತ್ತು ಫೋಟೋಗಳಿವೆ ಎಂದು ಹೇಳಿದ್ದರು. ಆದರೆ ವೈರಲ್ ಆಗಿರುವ ಫೋಟೋವನ್ನು ಪರಿಶೀಲಿಸಿದ ವರದಿಗಳ ಪ್ರಕಾರ, ಮೂಲ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆರ್ಎಸ್ಎಸ್ ಸಮವಸ್ತ್ರದಲ್ಲಿದ್ದರೆ, ನಂತರದ ಚಿತ್ರದಲ್ಲಿ ಇತರರನ್ನೂ ಅದೇ ರೀತಿಯಲ್ಲಿ ತೋರಿಸಲಾಗಿದೆ. ಈ ಬದಲಾವಣೆಗೆ AI ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೂರಿನಲ್ಲಿ, ಆರ್ಎಸ್ಎಸ್ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಲು ಅವರು ಪ್ರಯತ್ನಿಸಿದ್ದಾರೆ. ಇದು ಸುಳ್ಳು ಎಂದು ತಿಳಿದಿದ್ದರೂ ಸಹ ಸಚಿವರು ಉದ್ದೇಶಪೂರ್ವಕವಾಗಿ ಈ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಗಂಭೀರ ಸ್ವರೂಪದ ಕೃತ್ಯ ಇದಾಗಿದ್ದು, ಇದರ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
"ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕ ಶಾಂತಿಯನ್ನು ರಕ್ಷಿಸಲು ಹೊಣೆಗಾರರಾಗಿರುವ ಸಾಂವಿಧಾನಿಕ ಹುದ್ದೆಯಲ್ಲಿರುವ ಗೃಹ ಸಚಿವರೊಬ್ಬರು, ಒಂದು ಸಂಘಟನೆಯ ವಿರುದ್ಧ ಇಂತಹ ಸುಳ್ಳು ಮಾಹಿತಿಗಳನ್ನು ಹಂಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ" ಎಂದು ದೂರುದಾರ ತೇಜಸ್ ಎ. ಗೌಡ ಆರೋಪಿಸಿದ್ದಾರೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಪೊಲೀಸರನ್ನು ಕೋರಿದ್ದಾರೆ.
ರಾಜ್ಯದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಚಾರವಿದೆ. ಆದರೆ, ಸಚಿವರು ಅನಗತ್ಯವಾಗಿ ಆರ್ಎಸ್ಎಸ್ ವಿಚಾರವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅದರ ಬದಲಿಗೆ, ನಮ್ಮ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯತ್ತ ಗಮನಹರಿಸಿ. ನಿಮ್ಮ ತರ್ಕವನ್ನೇ ಅನುಸರಿಸುವುದಾದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಬ್ಬ ಭಯೋತ್ಪಾದಕರೊಂದಿಗೆ ಏಕೆ ಕೈಕುಲುಕಿದರು? ದಯವಿಟ್ಟು ಉತ್ತರಿಸಿ, ಸರ್ ಎಂದು ಒಬ್ಬ ಎಕ್ಸ್ ಬಳಕೆದಾರರು ಕಿಡಿಕಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಫೋಟೋ ಸಹ ಹಂಚಿಕೊಂಡಿದ್ದಾರೆ.
ಒಬ್ಬ ಜವಾಬ್ದಾರಿಯುತ ಗೃಹಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿ AI ಮೂಲಕ ಸೃಷ್ಟಿಸಲಾದ ಚಿತ್ರವೊಂದನ್ನು ಹಿಡಿದುಕೊಂಡು, ಅದರ ಆಧಾರದಲ್ಲಿ RSS ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲು ಮುಂದಾಗಿರುವುದು ನಿಜಕ್ಕೂ ಖಂಡನೀಯ! ಗೃಹಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವ ಪ್ರತಿಯೊಂದು ಮಾತಿಗೂ ಸಾಕ್ಷ್ಯ, ಸತ್ಯಾಂಶ ಮತ್ತು ಹೊಣೆಗಾರಿಕೆ ಇರಬೇಕು.
AI ಚಿತ್ರವನ್ನು ಹಿಡಿದುಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುವುದು ಯಾವ ರೀತಿಯ ರಾಜಕೀಯ ಜವಾಬ್ದಾರಿ? ಆರೋಪ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸುವ ಕನಿಷ್ಠ ಪ್ರಜ್ಞೆಯೂ ಬೇಡವೇ? RSS ಮೇಲೆ ಆರೋಪ ಮಾಡುವುದೇ ನಿಮ್ಮ ರಾಜಕೀಯ ಅಜೆಂಡಾ ಆಗಿದ್ದರೆ, ಅದಕ್ಕೆ ಜನರು ಮರುಳಾಗುತ್ತಾರೆ ಎಂದು ಭಾವಿಸಬೇಡಿ. ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ಚಿತ್ರಗಳನ್ನು ಸೃಷ್ಟಿಸುವುದು ಸುಲಭ. ಆದರೆ ಆ ಚಿತ್ರವನ್ನೇ ಸತ್ಯವೆಂದು ಬಿಂಬಿಸಿ ಜನರನ್ನು ದಾರಿ ತಪ್ಪಿಸುವುದು ಅತ್ಯಂತ ಬೇಜವಾಬ್ದಾರಿಯ ಕೆಲಸ. ಗೃಹಮಂತ್ರಿಯ ಕುರ್ಚಿಯ ಘನತೆ ಮತ್ತು ಜವಾಬ್ದಾರಿಯ ಬಗ್ಗೆಯೂ ಇದೆ. ಸಾಕ್ಷ್ಯವಿದ್ದರೆ ತನಿಖೆ ಮಾಡಿ, ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಿ ಎಂದು ಗುರು ಎಂಬುವವರು ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್).