ನ್ಯೂಸ್

ಹೊಸ ಕ್ರಿಮಿನಲ್​ ಕಾನೂನಿನಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೂರು; ಕಾರಣ ಹೀಗಿದೆ

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರಿಗೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಉತ್ತರಪ್ರದೇಶದ ಹತ್ರಾಸ್‌ ಕಾಲ್ತುಳಿತದಲ್ಲಿ 121 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಗಾಯಗೊಂಡ ಮಹಿಳೆಯರನ್ನು ಮಾತನಾಡಿಸಿದರು. ಮಳೆ ಬರುತ್ತಿದ್ದ ಕಾರಣ ಆ ವೇಳೆ ರೇಖಾ ಶರ್ಮಾ ಅವರಿನ್ನು ಮಳೆಯಿಂದ ರಕ್ಷಿಸಲು ಬೇರೊಬ್ಬರು ಛತ್ರಿ ಹಿಡಿದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಈ ವೀಡಿಯೊಗೆ ಸಂಸದೆ ಮಹುವಾ ಮೊಯಿತ್ರಾ ಅವರು ಎಕ್ಸ್​ ಖಾತೆಯಲ್ಲಿ ತಮ್ಮ ಬಾಸ್‌ನ ಪೈಜಾಮಾವನ್ನು ನಿಭಾಯಿಸುವಲ್ಲಿ ತುಂಬಾ ನಿರತರಾಗಿದ್ದಾರೆ ಎಂದು ಬರೆದಿದ್ದರು. ಆದರೆ ವಿವಾದ ಉಲ್ಬಣಗೊಂಡ ನಂತರ, ಮಹುವಾ ತಮ್ಮ ಪೋಸ್ಟ್ ಅನ್ನು ಡಿಲೀಟ್​ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಅಧ್ಯಕ್ಷೆ ರೇಖಾ ಶರ್ಮಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಕ್ಕಾಗಿ ಸ್ವಯಂ ಪ್ರೇರಿತವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಅಸಭ್ಯ ಟೀಕೆಗಳು ಅವಹೇಳನಕಾರಿ ಮತ್ತು ಘನತೆಯಿಂದ ಬದುಕುವ ಮಹಿಳೆಯ ಹಕ್ಕಿನ ಉಲ್ಲಂಘನೆಯಾಗಿದೆ" ಎಂದು ಎನ್‌ಸಿಡಬ್ಲ್ಯೂ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.

ಮಹುವಾ ಮೊಹಿತ್ರಾ ವಿರುದ್ಧ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದ ಹೊಸ ಕ್ರಿಮಿನಲ್ ಕೋಡ್‌ನ ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 79 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕ್ರಿಯೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​​)