ನ್ಯೂಸ್

ಕೌಶಲವಿದ್ದರೆ ಮಾತ್ರ ಪೈಪೋಟಿ ಎದುರಿಸಲು ಸಾಧ್ಯ

Mysuru - Desk - Ravikumar

ಹುಣಸೂರು: ವಿದ್ಯಾರ್ಥಿಗಳಲ್ಲಿ ವಿದ್ಯಾರ್ಹತೆಯೊಂದಿಗೆ ಕೌಶಲತೆ ಇದ್ದಲ್ಲಿ ಮಾತ್ರ ಇಂದಿನ ಪೈಪೋಟಿ ಯುಗವನ್ನು ಎದುರಿಸಲು ಸಾಧ್ಯವೆಂದು ಕೌಶಲಾಧಾರಿತ ಶಿಕ್ಷಣದ ರಾಷ್ಟ್ರೀಯ ತರಬೇತುದಾರ ಆರ್.ಕೆ. ಬಾಲಚಂದ್ರ ಅಭಿಪ್ರಾಯಪಟ್ಟರು.


ನಗರದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ್ಞಾನಧಾರ ಎಜುಕೇಷನಲ್ ಫೌಂಡೇಶನ್ ಮತ್ತು ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ನಾಂದಿ ಫೌಂಡೇಶನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತಾದ 6 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪ್ರತಿಯೊಂದು ವಿಷಯಕ್ಕೂ ವಿಶ್ವವಿದ್ಯಾನಿಲಯಗಳಲ್ಲಿ ಪ್ರತ್ಯೇಕ ವಿಭಾಗಗಳು ಇವೆ. ಆದರೆ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಬದುಕನ್ನು ಕಲಿಸಲು ಅಗತ್ಯ ಪಠ್ಯಪುಸ್ತಕವೇ ಇಲ್ಲ. ಬದುಕು ಹುಡುಗಾಟವಲ್ಲ, ಬದುಕು ಒಂದು ಹುಡುಕಾಟ ಎನ್ನುವುದನ್ನು ವಿದ್ಯಾರ್ಥಿಗಳು ಈಗಿನಿಂದಲೇ ಅರಿತುಕೊಳ್ಳಬೇಕು. ಪ್ರತಿದಿನ ಆಧುನಿಕ ಮತ್ತು ನೂತನ ತಂತ್ರಜ್ಞಾನಗಳ ಆವಿಷ್ಕಾರಗೊಳ್ಳುತ್ತಿರುವ ಇಂದಿನ ಸಂಕೀರ್ಣ ದಿನಗಳಲ್ಲಿ ವಿದ್ಯಾರ್ಹತೆಯೊಂದಿಗೆ ಜೀವನಕೌಶಲವೂ ಅಗತ್ಯವಾಗಿರಬೇಕು. ಇನ್ನೊಬ್ಬರೊಂದಿಗೆ ಸಂವಹನ ಮಾಡುವುದರಿಂದ ಆರಂಭಗೊಂಡ ಉದ್ಯೋಗ, ಸಂದರ್ಶನ ಎಲ್ಲದಕ್ಕೂ ಕೌಶಲತೆ ಇರಬೇಕು. ಮಾತಿನ ಕೌಶಲ ಎಲ್ಲದಕ್ಕೂ ಪ್ರಮುಖವಾಗುತ್ತದೆ. ನಿಮ್ಮ ನಡೆ ನುಡಿ, ಸಂವಹನಕಾರರೊಂದಿಗಿನ ನಿಮ್ಮ ಬಾಂಧವ್ಯ ನಂಬಿಕೆಗಳು ಎಲ್ಲವೂ ನಿಮ್ಮ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ ಎಂದರು.


8 ಲಕ್ಷ ಮಂದಿಯಲ್ಲಿ ನೀವೊಬ್ಬರಾಗಿ:
ದೇಶದಲ್ಲಿರುವ 9500 ವಿಶ್ವವಿದ್ಯಾನಿಲಯಗಳ 55 ಸಾವಿರ ಕಾಲೇಜುಗಳಿಂದ ಪ್ರತಿವರ್ಷ 3 ಕೋಟಿ 80 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಾರೆ. ಈ ಪೈಕಿ 88 ಲಕ್ಷ ಮಂದಿ ಪದವಿ ವ್ಯಾಸಂಗ ಸಂಪನ್ನಗೊಳಿಸಿಕೊಂಡು ಸುಮಾರು 8 ಲಕ್ಷ ಮಂದಿ ಸರ್ಕಾರಿ, ಖಾಸಗಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಿಕ್ಕವರು ಏನು ಮಾಡುತ್ತಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಜ್ಞಾನಧಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ಈಗಿಂದಲೇ ಕೌಶಲದ ತರಬೇತಿ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯವೆಂದರು.ಜ್ಞಾನಧಾರ ಫೌಂಢೇಶನ್ ಅಧ್ಯಕ್ಷೆ ಸಿ.ಯಮುನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸಾಧಿಸಬೇಕು ಎಂಬ ಮನಸ್ಸಿನೊಂದಿಗೆ ದುಡಿದರೆ ಅಸಾಧ್ಯವಾದುದೇನೂ ಇಲ್ಲ ಎನ್ನುವುದಕ್ಕೆ ದೇಶದ ಇತಿಹಾಸ ಸಾಕ್ಷಿ. ಆಧುನಿಕತೆಯೊಂದಿಗೆ ಬದುಕು ರೂಪಿಸಿಕೊಳ್ಳುವತ್ತ ವಿದ್ಯಾರ್ಥಿನಿಯರು ಮುಂದಡಿಯಿಡಬೇಕೆಂದರು.

ಬೆಂಗಳೂರಿನ ಸಂವಹನ ಕೌಶಲತರಬೇತುದಾರರಾದ ಲೀನರಾವ್, ಪವಿತ್ರ, ಜ್ಞಾನಧಾರ ಕಾಲೇಜಿನ ಎಂಡಿ ಡಾ.ಜೆ.ಸಿ.ನಾಗೇಂದ್ರ, ಪ್ರಾಂಶುಪಾಲ ಎಚ್.ಬಿ.ಕಾರ್ತೀಕ್, ಟ್ರಸ್ಟಿ ಕೆ.ಪರಶಿವ, ಪತ್ರಕರ್ತ ಹನಗೋಡು ನಟರಾಜ್ ಇದ್ದರು.