- ಸೌತ್ ಬ್ಯೂಟಿ ಕೈಯಲ್ಲಿವೆ ಹಲವು ಚಿತ್ರಗಳು
- ಮಹಾನಟಿ ಪಾತ್ರಕ್ಕೆ ಕಾಂತ ಚಿತ್ರದ ರೋಲ್ ಹೋಲಿಕೆ
- ಮಹಾನಟಿ ಬಗ್ಗೆ ಕೀರ್ತಿ ಸುರೇಶ್ ಮನದಾಳ
ಚೆನ್ನೈ: ಸೌತ್ ಸಿನಿಮಾದ ಸ್ಟಾರ್ ಹೀರೋಗಳ ಜತೆ ಸೂಪರ್ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕೀರ್ತಿ ಸುರೇಶ್ (Keerthy Suresh), ಶಿಸ್ತಿನ ಜೀವನ ಶೈಲಿ ಪಾಲಿಸುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವಂತ ಕಲಾವಿದೆ ಎಂಬುದು ಬಹುತೇಕ ಸಿನಿಪ್ರಿಯರಿಗೆ ಗೊತ್ತಿರುವ ಸಂಗತಿಯೇ. ಇದಕ್ಕೆ ಇನ್ನೊಂದು ಬಲವಾದ ಸಾಕ್ಷಿ 'ಮಹಾನಟಿ' ಚಿತ್ರಕ್ಕೆ ಅವರಿಗೆ ಸಿಕ್ಕ ರಾಷ್ಟ್ರಪ್ರಶಸ್ತಿ.
ಜೆ.ಕೆ. ಚಂದ್ರು ನಿರ್ದೇಶನದ ತಮ್ಮ ಮುಂಬರುವ ರಿವಾಲ್ವರ್ ರೀಟಾ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿರುವ ಕೀರ್ತಿ, ಇತ್ತೀಚೆಗೆ ತೆರೆಕಂಡ 'ಕಾಂತ' ಸಿನಿಮಾದ ಒಂದು ಪಾತ್ರವನ್ನು ತಾವು ನಟಿಸಿದ 'ಮಹಾನಟಿ'ಗೆ ಹೋಲಿಕೆ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದರು. 2018ರಲ್ಲಿ ರಿಲೀಸ್ ಆದ ಹಿರಿಯ ನಟಿ ಸಾವಿತ್ರಿ ಅವರ ಬಯೋಪಿಕ್ ಚಿತ್ರದಲ್ಲಿ ಥೇಟ್ ಸಾವಿತ್ರಿ ಅವರಂತೆ ಕಾಣಿಸಿಕೊಂಡ ಕೀರ್ತಿ ಸುರೇಶ್, ಈ ಸಿನಿಮಾದಲ್ಲಿನ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. ಇದೀಗ ಆ ಪಾತ್ರಕ್ಕೆ ನಟಿ ಭಾಗ್ಯಶ್ರೀ ಭೋರ್ಸೆ ನಟಿಸಿದ 'ಕಾಂತ' ಸಿನಿಮಾದ ಪಾತ್ರವನ್ನು ಕೆಲವರು ಹೋಲಿಕೆ ಮಾಡಿರುವ ಕುರಿತಾಗಿ ಕೇಳಲಾದ ಪ್ರಶ್ನೆಗೆ ಕೀರ್ತಿ ಉತ್ತರಿಸಿದ್ದಾರೆ.
"ಮಹಾನಟಿ' ಬಿಡುಗಡೆಯಾಗಿ ಇಂದಿಗೆ 7 ವರ್ಷಗಳೇ ಕಳೆದಿವೆ. ಇಂದಿಗೂ ಸಹ ಆ ಪಾತ್ರದ ಬಗ್ಗೆ ನನಗೆ ಸಂತಸ, ಹೆಮ್ಮೆಯಿದೆ. ನಾನು ಎಷ್ಟೇ ಚಿತ್ರಗಳಲ್ಲಿ ಕೆಲಸ ಮಾಡಿದ್ರೂ, ಆ ಸಿನಿಮಾ ತಂದುಕೊಟ್ಟ ಯಶಸ್ಸು, ಹಿರಿಮೆಗೆ ನಾನು ಕೃತಜ್ಞ. ಆದಾಗ್ಯೂ, ನಾನು ಅದಕ್ಕೆ ತಕ್ಕಂತೆ ಬದುಕಬೇಕಾಗಿರುವುದರಿಂದ ಅಥವಾ ಆ ಅಭಿನಯವನ್ನು ಮೀರಬೇಕಾಗಿರುವುದರಿಂದ ಮುಂದಿನ ಸಿನಿಮಾಗಳು ಅಷ್ಟೇ ಸವಾಲಿನದ್ದು. ಒಮ್ಮೆ ಹಿಂತಿರುಗಿ ನೋಡಿದಾಗ, ಇಷ್ಟು ಚಿಕ್ಕ ವಯಸ್ಸಿನಲ್ಲಿ ನಾನು ಆ ಪಾತ್ರವನ್ನು ನಿರ್ವಹಿಸಿದ್ದಕ್ಕೆ ನನಗೇ ಆಶ್ಚರ್ಯವಾಗುತ್ತೆ" ಎಂದರು.
ಇನ್ನು ಕೀರ್ತಿ ಅಭಿನಯದ ಮುಂಬರುವ ಚಿತ್ರ 'ರಿವಾಲ್ವರ್ ರೀಟಾ'ದಲ್ಲಿ ರಾಧಿಕಾ ಶರತ್‌ಕುಮಾರ್, ಸೂಪರ್ ಸುಬ್ಬರಾಯನ್, ಸುನಿಲ್, ಅಜಯ್ ಘೋಷ್, ರೆಡಿನ್ ಕಿಂಗ್ಸ್ಲಿ, ಜಾನ್ ವಿಜಯ್, ಕಲ್ಯಾಣ್, ಸುರೇಶ್ ಚಕ್ರವರ್ತಿ, ಕಥಿರವನ್, ಸೆಂಡ್ರಾಯನ್, ಆಗಸ್ಟಿನ್, ಬ್ಲೇಡ್ ಶಂಕರ್, ರಾಮಚಂದ್ರನ್, ಅಕ್ಷತಾ ಅಜಿತ್, ಕುಹಾಸಿನಿ ಮತ್ತು ಗಾಯತ್ರಿ ಶಾನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರ ಇದೇ ನ.28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ,(ಏಜೆನ್ಸೀಸ್).