ನ್ಯೂಸ್

ಸಿಎಂ ಗಾದಿಗೆ ಸಮುದಾಯಗಳ ಒತ್ತಡ ತಂತ್ರ: ಒಕ್ಕಲಿಗರು, ಕುರುಬರ ಬಿಗಿಪಟ್ಟು; ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಮೇಲೂ ಪ್ರಭಾವ

Webdesk - Ravikanth

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿಯ ಖುಷಿ ಮೂಡ್​ನಿಂದ ಕಾಂಗ್ರೆಸ್ ಹೊರಬಂದು, ಸರ್ಕಾರ ರಚನೆಗೆ ಪೂರ್ವಭಾವಿಯಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಸರತ್ತಿಗೆ ಚಾಲನೆ ನೀಡಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಸಮುದಾಯದ ನಾಯಕನಿಗೇ ನೀಡಬೇಕು ಎಂದು ಒಕ್ಕಲಿಗರು ಹಾಗೂ ಕುರುಬರು ಬಿಗಿಪಟ್ಟು ಹಿಡಿದಿದ್ದಾರೆ.

ಎರಡೂ ಪ್ರಬಲ ಸಮುದಾಯಗಳು ಪ್ರತ್ಯೇಕ ಸಭೆ ನಡೆಸುವ ಮೂಲಕ ಒತ್ತಡತಂತ್ರ ಬಳಸಿದ್ದು, ಶಾಸಕಾಂಗದ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್ ಕರೆದಿದ್ದ ಸಭೆಯ ಮೇಲೂ ಪ್ರಭಾವಬೀರಿದೆ.

ಈಗಷ್ಟೇ ಚುನಾವಣೆ ನಡೆದಿದ್ದು, ಸ್ಪಷ್ಟ ಜನಾದೇಶ ದೊರೆತಿದೆ. ಸಿಎಂ ಹುದ್ದೆಯ ಹಗ್ಗಜಗ್ಗಾಟದಿಂದ ಜನತೆಗೆ ತಪು್ಪ ಸಂದೇಶ ರವಾನೆಯಾಗಲಿದೆ ಎಂದು ಅರಿತ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆಯಿಟ್ಟಿದೆ.

ಬಿಸಿ ಚರ್ಚೆ: ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠಾಧೀಶ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯ ಸಭೆ ಸೇರಿ, ಸಿಎಂ ಹುದ್ದೆ ಸಮುದಾಯಕ್ಕೆ ಪಡೆದುಕೊಳ್ಳಲೆಂದು ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ.

ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಈ ಪಟ್ಟ ಕಟ್ಟಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಗಿದ್ದು, ಕಾಂಗ್ರೆಸ್ ಮೇಲೆ ನೇರವಾಗಿ ಒತ್ತಡ ಹೇರಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕುರುಬ ಸಮುದಾಯವು ಸಭೆ ಸೇರುವ ಮೂಲಕ

ತನ್ನ ಬಲಪ್ರದರ್ಶಿಸಿದೆ. ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಮಾಜಿ ಮೇಯರ್ ವೆಂಕಟೇಶಮೂರ್ತಿ, ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಎಂ.ಶಿವರಾಜ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಭಾಗವಹಿಸಿದ್ದರು.

ಸ್ವಾಮೀಜಿಗಳಿಗೆ ಈ ಸಭೆ ಏಕೆ ಬೇಕಿತ್ತು ಎಂದು ಕೆಲವರು ಪ್ರಶ್ನೆ ಮಾಡಬಹುದು. ಆದರೆ, ನಾಡಿನ ರಾಜಕಾರಣದ ವಿಚಾರ ಬಗ್ಗೆ ನಾವು ಪ್ರಸ್ತಾಪ ಮಾಡುತ್ತಿಲ್ಲ. ಸಮುದಾಯ ಹಾಗೂ ಮನೆಯ ಮಗನಾಗಿ ನಾಡು ಕಟ್ಟಲು ಡಿಕೆಶಿಗೆ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಇವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. | ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಅವರಿಗೆ ಸಹಕಾರ ನೀಡಿದ್ದೇನೆ, ಈಗ ಅವರೂ ಸಹಕಾರ ನೀಡುತ್ತಾರೆ. ಕಾಂಗ್ರೆಸ್ ಎಲ್ಲವನ್ನೂ ನನಗೆ ನೀಡಿದೆ, ನಾನು ಪಕ್ಷನಿಷ್ಠನಾಗಿ ನಡೆದುಕೊಂಡಿದ್ದೇನೆ. ಜೈಲಿನಿಂದ ಹೊರಬರುತ್ತಲೇ ಪಕ್ಷದ ಜವಾಬ್ದಾರಿ ವಹಿಸಿಕೊಂಡು ಹಗಲು, ರಾತ್ರಿ ದುಡಿದಿದ್ದೇನೆ. ನೋಡೋಣ ಸಿಎಂ ಆಗ್ತಿನಿ ಎಂಬ ನಂಬಿಕೆ ನನಗಿದೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಒಕ್ಕಲಿಗರ ವಾದ

  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಪಕ್ಷದ ಸಂಪ್ರದಾಯದ ಪ್ರಕಾರ ಅವರನ್ನು ಸಿಎಂ ಮಾಡುವುದು ನ್ಯಾಯೋಚಿತ.
  • ಪಕ್ಷದ ಸಂಘಟನೆಗಾಗಿ ರಾಜ್ಯದ ತುಂಬ ಓಡಾಡಿ ಹಗಲಿರುಳು ಶ್ರಮಿಸಿ, ಕಾರ್ಯಕರ್ತರಲ್ಲಿ ಚೈತನ್ಯ ಹಾಗೂ ಮುಖಂಡರಲ್ಲಿ ಬಲ ತುಂಬಿದ್ದಾರೆ.
  • ಕೆಂಗಲ್ ಹನುಮಂತಯ್ಯ ಆದಿಯಾಗಿ ರಾಜ್ಯದ ಅಭಿವೃದ್ಧಿಗೆ ಮುಂಗಾಣ್ಕೆ, ಉತ್ತಮ ಆಡಳಿತ ನೀಡಿದ ಶ್ರೇಯಸ್ಸು ಒಕ್ಕಲಿಗರಿಗೆ ಸಲ್ಲುತ್ತದೆ.

ಕುರುಬರ ನಿಲುವು

  • ಅಧಿಕಾರದಲ್ಲಿದ್ದಾಗ ಜನಪರ ಯೋಜನೆಗಳನ್ನು ಜಾರಿಗೊಳಿಸಿ, ಸಮತೋಲನದ ಆಡಳಿತ ನೀಡಿದ ಅನುಭವಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಪಕ್ಷಕ್ಕೆ ಹಿತ.
  • ಪ್ರತಿಪಕ್ಷ ನಾಯಕರಾಗಿ ಸಮರ್ಥವಾಗಿ ಹೋರಾಟ ನಡೆಸಿದ್ದರಿಂದ ಬಿಜೆಪಿ ವೈಫಲ್ಯ, ಜನ ವಿರೋಧಿ ನೀತಿ ರಾಜ್ಯದ ಮುಂದಿಡಲು ಸಾಧ್ಯವಾಗಿದೆ.
  • ಎಲ್ಲ ಜಾತಿ, ವರ್ಗಗಳ ಪ್ರೀತಿ ವಿಶ್ವಾಸ ಗಳಿಸಿದ ವರ್ಚಸ್ವೀ ನಾಯಕ. ರಾಜ್ಯಾದ್ಯಂತ ಚುನಾವಣಾ ಪ್ರಚಾರ ಮಾಡಿ ಪಕ್ಷದ ಪರವಾದ ಅಲೆ ಸೃಷ್ಟಿಸಿದ್ದಾರೆ.
  • ್ಝ ವೈಯಕ್ತಿಕ ಆರೋಗ್ಯವನ್ನು ಲೆಕ್ಕಿಸದೆ ಪಕ್ಷ ಸದೃಢಗೊಳಿಸಲು ಶ್ರಮಿಸಿ, ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ.