ತೋಟದೂರು ಗ್ರಾಪಂ ವ್ಯಾಪ್ತಿಯ ನಿವೇಶನರಹಿತರಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ತೋಟದೂರು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಲಕ್ಷ್ಮಣಾಚಾರ್, ರಮೇಶ್ ಕೆಳಗೂರು, ಮೋಹನ್ , ಗೋಪಾಲ ಹಡ್ಲು ಇತರರಿದ್ದರು. 
ನ್ಯೂಸ್

ಅರ್ಹರಿಗೆ ಶೀಘ್ರ ನಿವೇಶನ ಒದಗಿಸಿ

ಕಳಸ: ತಾಲೂಕಿನ ತೋಟದೂರು ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳಬೇಕು ಹಾಗೂ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ವಿಳಂಬ ಆಗುತ್ತಿರುವುದನ್ನು ವಿರೋಧಿಸಿ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ತೋಟದೂರು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿ ಪಿಡಿಒಗೆ ಮನವಿ ಸಲ್ಲಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ಸೂರಿಗಾಗಿ ಸಮರ ಘೋಷಣೆ ಅಡಿಯಲ್ಲಿ ನಮ್ಮ ಪಕ್ಷ ಪ್ರತಿ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಜಾಗೃತಿ ಮೂಡಿಸುವ ಹೋರಾಟ ಮಾಡಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಚ್ಚರಿಸುವ ಕೆಲಸ ಮಾಡಿದ್ದೆವು. ಇದರ ಪರಿಣಾಮ ನಿವೇಶನ ರಹಿತರ ಪಟ್ಟಿ ತಯಾರಿಸುವ ಕೆಲಸ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸುವ ತಯಾರಿ ನಡೆದಿತ್ತು. ಆದರೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆಯಿಂದ ನಿವೇಶನಕ್ಕೆ ಹಕ್ಕುಪತ್ರ ಹಂಚಲಿಲ್ಲ ಎಂದು ಆರೋಪಿಸಿದರು.
ಈ ಹಿಂದೆ 77 ಜನರ ಲಾನುಭವಿಗಳ ಪಟ್ಟಿ ತಯಾರಿಸಿದೆ. ಇನ್ನೂ ಬಹಳ ಜನ ನಿವೇಶನ ರಹಿತರ ಪಟ್ಟಿಗೆ ಸೇರ್ಪಡೆ ಮಾಡುವ ತುರ್ತು ಕೆಲಸ ನಡೆಯಬೇಕಾಗಿದೆ. ಹಾಗೆಯೆ ತೋಟದೂರು ಪಂಚಾಯಿತಿಗೆ ಒಳಪಟ್ಟ ಕಗ್ಗನಳ್ಳದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಹಳಷ್ಟು ಬಡ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸವಿದ್ದಾರೆ. ಇವರು ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಕೂಲಿ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಸುಮಾರು 30-40 ವರ್ಷಗಳಿಂದ ವಾಸವಿದ್ದ ಮನೆಗಳಿಗೆ 94 ಸಿ ಅಡಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕಡತ ತಯಾರಿಸಿ ತುರ್ತು ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಸಿಪಿಐ ಮುಖಂಡರಾದ ಲಕ್ಷ್ಮಣಾಚಾರ್, ರಮೇಶ್ ಕೆಳಗೂರು, ಮೋಹನ್ , ಗೋಪಾಲ ಹಡ್ಲು, ಸುನೀಲ್ ಮೇತಿಖಾನ್, ಮಂಜುನಾಥ್, ಅಭಿಷೇಕ್ ಬಾಳೆಹೊಳೆ, ಜಯಂತಿ, ವಸಂತಿ ಬಿ.ಆರ್. ಮಂಜುನಾಥ್ ಇತರರಿದ್ದರು.