ಬೆಂಗಳೂರು: ಮುಸ್ಲಿಂ ಸಮುದಾಯದ ಕುರಿತಾಗಿ ಅವಹೇಳನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ.
ತೆಕ್ಕಾರುವಿನ ಎಸ್.ಬಿ. ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಏಕಸದಸ್ಯ ರಜಾಕಾಲೀನ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಸಕ್ಷಮ ನ್ಯಾಯಾಲಯಕ್ಕೆ ಈಗಾಗಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಸ್ಪಷ್ಟನೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪೀಠವು ಲಿಖಿತ ಆದೇಶದಲ್ಲಿ ಅದನ್ನು ಸ್ಪಷ್ಟಪಡಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ಧರ್ಮ- ಧರ್ಮಗಳ ನಡುವೆ ದ್ವೇಷ ಹರಡುವಂಥ ಯಾವುದೇ ತೆರನಾದ ಕೆಲಸವನ್ನು ಅರ್ಜಿದಾರರು ಮಾಡಿಲ್ಲ. ಸಂಪೂರ್ಣ ದೂರಿನ ಪ್ರತಿ ಓದಿದರೆ ತಪ್ಪಾಗಿ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ ಎಂದು ಅರ್ಥವಾಗುತ್ತದೆ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರ ಪರ ವಕೀಲ ಎಸ್. ಬಾಲನ್, ಮುಸ್ಲಿಂ ಸಮುದಾಯವನ್ನು ತೆಕ್ಕಾರಿನ ಕಂತ್ರಿಗಳು ಎಂದು ನಿಂದಿಸಿದ್ದಾರೆ. ಈ ಬಗ್ಗೆ ವಿಡಿಯೋ ತುಣುಕು ಲಭ್ಯವಿದೆ. ಪೂಂಜಾ ವಿರುದ್ಧ ಇಂಥದ್ದೇ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಾಗಿವೆ. ನೂರು ಎಫ್‌ಐಆರ್ ದಾಖಲಿಸಲಿ. ಇದಕ್ಕೆ ನಾನು ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದೆಲ್ಲವನ್ನು ಪೀಠ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಅಲ್ಲದೆ ಮುಸ್ಲಿಂ ಸಮುದಾಯವನ್ನು ವಂಚಕರು ಎಂದಿದ್ದಾರೆ, ಅಲ್ಪಸಂಖ್ಯಾತ ಸಮುದಾಯವನ್ನು ಸಮಾರಂಭಕ್ಕೆ ಆಹ್ವಾನಿಸಬಾರದಿತ್ತು ಎಂದು ಹೇಳಿದ್ದಾರೆ. ಪೂಂಜಾ ಅವರ ಹೇಳಿಕೆಗಳು ಸಂವಿಧಾನಕ್ಕೆ ವಿರುದ್ಧವಾಗಿದೆ. ನಮ್ಮದು ಸಂವಿಧಾನಕ್ಕೆ ಬದ್ಧವಾಗಿರುವ ದೇಶವೇ ವಿನಾ, ಧಾರ್ಮಿಕ ವಿಚಾರಗಳಿಗೆ ಬದ್ಧವಾಗಿರುವ ದೇಶವಲ್ಲ. ಹೀಗಾಗಿ, ಪೂಂಜಾ ವಿಚಾರಣೆ ಎದುರಿಸಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಹೈಕೋರ್ಟ್‌ನ ಸಮನ್ವಯ ಪೀಠಗಳು ಪೂಂಜಾ ವಿರುದ್ಧ ಬೇರೆ ಪ್ರಕರಣಗಳಿಗೆ ತಡೆ ನೀಡಿರುವುದನ್ನು ಪರಿಗಣಿಸಿ, ಅರ್ಜಿದಾರರ ಕೋರಿಕೆಯಂತೆ ಹಾಲಿ ಪ್ರಕರಣಕ್ಕೆ ತಡೆ ನೀಡುವುದು ಸೂಕ್ತ ಎಂದು ಆದೇಶಿಸಿ, ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿತು.