Commonwealth Games: ಬಾಕ್ಸಿಂಗ್ ಯಶಸ್ಸಿನಲ್ಲಿ ಕನ್ನಡಿಗ ಕುಟ್ಟಪ್ಪ ಪಾತ್ರ
ಬಾಕ್ಸಿಂಗ್ನಲ್ಲಿ ಭಾರತ ಒಟ್ಟು 10 ಪದಕ ಜಯಿಸಿತು. ಈ ಪೈಕಿ ತಲಾ 2 ಚಿನ್ನ, 2 ಬೆಳ್ಳಿ ಸಹಿತ 4 ಪದಕಗಳು ಪುರುಷ ಬಾಕ್ಸರ್ಗಳ ಕೊಡುಗೆಯಾಗಿದೆ. ಭಾರತ ಪುರುಷ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿರುವ ಕನ್ನಡಿಗ ಕೆ.ಸಿ. ಕುಟ್ಟಪ್ಪ ಅವರ ಪಾತ್ರ ಇದರಲ್ಲಿ ಪ್ರಮುಖವಾದುದು.
ಕೊಡಗು ಮೂಲದ ಕುಟ್ಟಪ್ಪ ಸೈನಿಕರಾಗಿದ್ದು, ಹಾಲಿ ವರ್ಷಾರಂಭದಲ್ಲಿ ಪುರುಷರ ತಂಡದ ಕೋಚ್ ಆಗಿ 3ನೇ ಅವಧಿಗೆ ಮರುನೇಮಕವಾಗಿದ್ದರು. ಇದಕ್ಕೆ ಮುನ್ನ 2018-2021 ಮತ್ತು 2023-2024ರಲ್ಲಿ ಮೊದಲ 2 ಅವಧಿ ಕಾರ್ಯನಿರ್ವಹಿಸಿದ್ದರು. ಆಗಲೂ ಹಲವು ಬಾಕ್ಸರ್ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ವಿಜೇಂದರ್ ಸಿಂಗ್ ಕಂಚಿನ ಪದಕ ಗೆದ್ದಾಗಲೂ ಭಾರತ ತಂಡದ ಸಹಾಯಕ ತರಬೇತುದಾರರಾಗಿದ್ದರು. ಕುಟ್ಟಪ್ಪ ದ್ರೋಣಾಚಾರ್ಯ ಪ್ರಶಸ್ತಿ ಪುರಸತರೂ ಆಗಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕರ್ನಾಟಕದ ಒಟ್ಟು 8 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಪ್ಯಾರಾಥ್ಲೀಟ್ ಶಿಲ್ಪಾ ಕೆ.ಎಸ್. ಏಕೈಕ ಪದಕ ವಿಜೇತರೆನಿಸಿದರು. ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಕೆ.ಜಿ.ಶೈಲ ಮತ್ತು ಶಾಂತಾ ದಂಪತಿಯ ಪುತ್ರಿ ಕೆ.ಎಸ್.ಶಿಲ್ಪಾ ಮಹಿಳೆಯರ ಎಫ್-57 ಶಾಟ್ಪುಟ್ನಲ್ಲಿ ಕಂಚಿ-ನ ಪದಕ ಗೆದ್ದುಕೊಂಡರು. ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡರೂ ಎದೆಗುಂದದೆ ಆತ್ಮ ಸ್ಥೆರ್ಯ, ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಪದಕ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಗ್ಲಾಸ್ಗೋದಲ್ಲಿ ಭಾರತ ಗೆದ್ದ ಒಟ್ಟು 13 ಚಿನ್ನದ ಪದಕಗಳಲ್ಲಿ 7 ಹರಿಯಾಣ ರಾಜ್ಯದ ಕ್ರೀಡಾಪಟುಗಳ ಸಾಧನೆಯಾಗಿದೆ. ಬಾಕ್ಸಿಂಗ್ನಲ್ಲಿ ಭಾರತ ಗೆದ್ದ 7 ಚಿನ್ನದ ಪದಕಗಳ ಪೈಕಿ 6 ಹರಿಯಾಣದ ಬಾಕ್ಸರ್ಗಳು ಗೆದ್ದುಕೊಟ್ಟರು. ಜತೆಗೆ ಹರಿಯಾಣ ಕ್ರೀಡಾಪಟುಗಳು 2 ಬೆಳ್ಳಿ, 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. "ಯುವಕರು ತಮ್ಮ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನತ್ತ ಹರಿಸಿದಾಗ ಮತ್ತು ಮಾದಕ ದ್ರವ್ಯಗಳನ್ನು ದೂರವಿಟ್ಟಾಗ ಅವರು ಈ ರೀತಿಯಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತರುತ್ತಾರೆ. ಹರಿಯಾಣದ ಯುವಕರು ಪದಕಗಳ ವ್ಯಸನಿಗಳಾಗಿದ್ದಾರೆ' ಎಂದು ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಹೇಳಿದ್ದಾರೆ.