Commonwealth Games: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಒಟ್ಟು 10 ಪದಕಗಳು ಖಚಿತ!
ಗ್ಲಾಸ್ಗೋ: ಕಾಮನ್ವೆಲ್ತ್ ಗೇಮ್ಸ್ನ (Commonwealth Games) ಬಾಕ್ಸಿಂಗ್ನಲ್ಲಿ (boxing) ಭಾರತೀಯರು ಭರ್ಜರಿ ಪ್ರಾಬಲ್ಯ ಮುಂದುವರಿಸಿದ್ದು, ಜಾದುಮಣಿ ಸಿಂಗ್, ಅಂಕುಶ್ ಯಾದವ್, ಸಚಿನ್ ಸಿವಾಚ್, ನರೇಂದರ್ ಬೆರ್ವಾಲ್, ಸಾ ಚೌಧರಿ, ಅರುಂಧತಿ ಚೌಧರಿ, ಜಾಸ್ಮಿನ್ ಲಂಬೋರಿಯಾ ಸಹಿತ 7 ಬಾಕ್ಸರ್ಗಳು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ 7 ಪದಕಗಳನ್ನು ಖಚಿತಪಡಿಸಿದರು. ಈ ಮುನ್ನ ಪ್ರಿಯಾ ಘಂಘಾಸ್ (60 ಕೆಜಿ) ಮತ್ತು ಪ್ರೀತಿ ಪವಾರ್ (54ಕೆಜಿ) ಕೂಡ ಸೆಮಿಫೈನಲ್ಗೇರಿದ್ದರೆ, ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೋಗೋರ್ಹೈನ್ (75 ಕೆಜಿ) ಬೈ ಮೂಲಕ ನೇರವಾಗಿ ಉಪಾಂತ್ಯ ಪ್ರವೇಶಿಸಿದ್ದರು. ಇದರಿಂದ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಒಟ್ಟು 10 ಪದಕಗಳು ಖಚಿತವೆನಿಸಿವೆ.
ಶುಕ್ರವಾರ ಸೆಮಿಫೈನಲ್ ಮತ್ತು ಶನಿವಾರ ಫೈನಲ್ ಪಂದ್ಯಗಳು ನಡೆಯಲಿದ್ದು, ಭಾರತೀಯ ಬಾಕ್ಸರ್ಗಳಿಗೆ ಒಲಿಯಲಿರುವ ಪದಕಗಳ ಬಣ್ಣ ಯಾವುದೆಂದು ಆಗ ನಿರ್ಧಾರವಾಗಲಿದೆ. ಸೆಮೀಸ್ನಲ್ಲಿ ಸೋತರೂ ಕನಿಷ್ಠ ಕಂಚು ಖಚಿತವೆನಿಸಿದೆ.
ಬುಧವಾರ ನಡೆದ ಮಹಿಳೆಯರ 51 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಸಾ ಚೌಧರಿ ಉತ್ತರ ಐರ್ಲೆಂಡ್ನ ಕೈಟ್ಲಿನ್ ಪೆಯರ್ಸ್ ವಿರುದ್ಧ 5-0 ಅಂತರದಿಂದ ಗೆದ್ದರೆ, ಅರುಂಧತಿ 70 ಕೆಜಿ ವಿಭಾಗದಲ್ಲಿ ನ್ಯೂಜಿಲೆಂಡ್ನ ಮಾರ್ಗನ್ ಹೆಂಡರ್ಸನ್ ವಿರುದ್ಧ 3-1ರಿಂದ ಹೋರಾಟಯುತ ಗೆಲುವು ಸಾಧಿಸಿದರು. ಜಾಸ್ಮಿನ್ 57 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್ನ ಎಲಿಸ್ ಗ್ಲೆೃನ್ ವಿರುದ್ಧ 4-1ರಿಂದ ಗೆಲುವು ದಾಖಲಿಸಿದರು.
ಸಚಿನ್ ಸಿವಾಚ್ ಪುರುಷರ 60 ಕೆಜಿ ವಿಭಾಗದಲ್ಲಿ ಬೋತ್ಸವಾನದ ಟ್ರೆಷರ್ ಮೊರೆಮಿ ವಿರುದ್ಧ 5-0ಯಿಂದ ಗೆದ್ದರೆ, ಅಂಕುಶ್ 80 ಕೆಜಿ ವಿಭಾಗದಲ್ಲಿ ಸೀಶೆಲ್ಸ್ನ ಜೇಡ್ ಮಿಕಾಕ್ ವಿರುದ್ಧ 5-0ಯಿಂದ ಜಯಿಸಿದರು. ನರೇಂದರ್ 90+ಕೆಜಿ ವಿಭಾಗದಲ್ಲಿ ಸಮೋವಾದ ಮಿಚೆಲ್ ಸೆಕೋ ವಿರುದ್ಧ 3-2ರಿಂದ ಹೋರಾಟಯುತ ಗೆಲುವು ದಾಖಲಿಸಿದರು. ಇದಕ್ಕೆ ಮುನ್ನ ಮಂಗಳವಾರ ರಾತ್ರಿ ನಡೆದ 55 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಜಾದುಮಣಿ ಸಿಂಗ್ ಜಾಂಬಿಯಾದ ಎಂವೆಂಗೊ ಎಂವೇಲ್ ವಿರುದ್ಧ 5&0ಯಿಂದ ಗೆದ್ದು ಪದಕ ಖಚಿತಪಡಿಸಿಕೊಂಡಿದ್ದರು.
ಆದರೆ 90 ಕೆಜಿ ವಿಭಾಗದಲ್ಲಿ ಕಪಿಲಾ ಪೊಖಾರಿಯಾ ಮತ್ತು ಮಹಿಳೆಯರ 65 ಕೆಜಿ ವಿಭಾಗದಲ್ಲಿ ಪರ್ವೀನ್ ಕ್ವಾರ್ಟರ್ಫೈನಲ್ನಲ್ಲೇ ಸೋತು ಪದಕವಂಚಿತರಾಗಿದ್ದರು. ಕೂಟಕ್ಕೆ ತೆರಳಿದ ಭಾರತದ 14 ಬಾಕ್ಸರ್ಗಳಲ್ಲಿ 10 ಬಾಕ್ಸರ್ಗಳು ಪದಕದೊಂದಿಗೆ ತವರಿಗೆ ಮರಳಲಿದ್ದಾರೆ.