ನ್ಯೂಸ್

ಬೆಂಬಲ ಬೆಲೆ ಕುರಿತು ಸಮಿತಿ: ಪಂಚರಾಜ್ಯ ಚುನಾವಣೆ ನಂತರ ರಚನೆ; ಕೇಂದ್ರ ಮಾಹಿತಿ

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗೆ ಸಂಬಂಧಿಸಿದ ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಚುನಾವಣಾ ಆಯೋಗದ ಸಲಹೆಯಂತೆ ಈ ಕೆಲಸವನ್ನು ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗೆ ಉತ್ತರ ನೀಡಿದ ಸಚಿವ ನರೇಂದ್ರ ಸಿಂಗ್, ಬೆಳೆ ವೈವಿಧಿ್ಯಕರಣ, ನೈಸರ್ಗಿಕ ಕೃಷಿ ಮತ್ತು ಎಂಎಸ್​ಪಿಯನ್ನು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಸಮಿತಿ ರಚಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿರುವುದು ಇಡೀ ದೇಶಕ್ಕೇ ಗೊತ್ತಿದೆ. ಪ್ರಧಾನಿಯವರ ಘೋಷಣೆಗೆ ಸರ್ಕಾರ ಬದ್ಧವಾಗಿದೆ. ಎಂಎಸ್​ಪಿ ಕುರಿತ ಸಮಿತಿ ರಚನೆಯ ವಿಚಾರ ಸಚಿವಾಲಯದ ಪರಿಗಣನೆಯಲ್ಲಿದೆ. ಈ ಕುರಿತು ಚುನಾವಣಾ ಅಯೋಗಕ್ಕೆ ಪತ್ರ ಬರೆದು ವಿಚಾರಿಸಿದ ವೇಳೆ, ಪಂಚರಾಜ್ಯ ಚುನಾವಣೆ ಮುಗಿದ ಬಳಿಕ ಮಾಡುವಂತೆ ಸಲಹೆ ನೀಡಿದೆ ಎಂದು ವಿವರಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ಧತೆ ಒದಗಿಸುವ ಕೆಲಸ ಆಗುವುದೇ ಎಂದು ಬಿಜೆಡಿ ಸದಸ್ಯ ಪ್ರಸನ್ನ ಆಚಾರ್ಯ ಕೇಳಿದ್ದರು.

ಎಸ್​ಕೆಎಂ ಟೀಕೆ ಹಿನ್ನೆಲೆ: ಎಂಎಸ್​ಪಿ ಸಮಿತಿ ರಚಿಸುವುದಾಗಿ ನೀಡಿದ್ದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಹೀಗಾಗಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಕರೆ ನೀಡಿತ್ತು.

ಸಂಸತ್​ನಲ್ಲಿ ಏನಾಯ್ತು?

  • ಭಾರತದ ಲಡಾಖ್​ನ ಭೌಗೋಳಿಕ ವ್ಯಾಪ್ತಿಯ 38,000 ಚದರ ಕಿ.ಮೀ. ವ್ಯಾಪ್ತಿಯನ್ನು ಚೀನಾ ಆರು ದಶಕಗಳಿಂದ ಅಕ್ರಮವಾಗಿ ತನ್ನ ಅಧೀನದಲ್ಲಿ ಇರಿಸಿಕೊಂಡಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನ 5180 ಚ.ಕಿ.ಮೀ. ಪ್ರದೇಶ ಅತಿಕ್ರಮಿಸಿ ಇರಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  • ನಿರಾಶ್ರಿತರು ಮತ್ತು ಆಶ್ರಯ ಕೋರುವವರ ರಕ್ಷಣೆಗಾಗಿ ವ್ಯವಸ್ಥೆ ರಚಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ಶಶಿ ತರೂರ್ ಖಾಸಗಿ ಮಸೂದೆಯನ್ನು ಮಂಡಿಸಿದರು.
  • ಸ್ಪೀಕರ್ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ಸಂಸತ್ತಿನ ಒಳಗೆ ಅಥವಾ ಹೊರಗೆ ಲೋಕಸಭೆ ಸದಸ್ಯರು ಯಾರೂ ಮಾಡಬಾರದು. ಅದು ಲೋಕಸಭೆಗೆ ಘನತೆಗೆ ತಕ್ಕುದಾದ್ದಲ್ಲ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು. ಟಿಎಂಸಿ ಸದಸ್ಯ ಮಹುವಾ ಮೊಯಿತ್ರಾ ಅವರ ಹೇಳಿಕೆಗೆ ಬಿರ್ಲಾ, ಪರೋಕ್ಷವಾಗಿ ಈ ಎಚ್ಚರಿಕೆ ನೀಡಿದ್ದರು.
  • ಕೆಲವು ಲಾಯರ್​ಗಳ ‘ವಿಪರೀತ’ ಶುಲ್ಕದ ಮೇಲೆ ಮಿತಿ ಹೇರುವುದು ಸರ್ಕಾರದ ಪಾಲಿಗೆ ಕಷ್ಟದ ಕೆಲಸ ಎಂದ ಸಚಿವ ಕಿರಣ್ ರಿಜಿಜು.

ಕೃಷಿಕರ ಆತ್ಮಹತ್ಯೆ ತಡೆಗೆ ಪ್ರಯತ್ನ

ಆಂಧ್ರಪ್ರದೇಶದಲ್ಲಿ ಕಡಿಮೆ ಎಂಎಸ್​ಪಿ ಮತ್ತು ಕೃಷಿ ಉತ್ಪನ್ನ ಖರೀದಿ ಪ್ರಮಾಣ ಕಡಿಮೆ ಆದ ಕಾರಣ ಕೃಷಿಕರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುವುದೇ ಎಂದು ಟಿಡಿಪಿ ಸಂಸದ ಕನಕಮೇಡಲ್ ರವೀಂದ್ರ ಕುಮಾರ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತೋಮರ್, ಕೃಷಿಕರು ತಮ್ಮ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಪಡೆಯುವಂತೆ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ಅದನ್ನು ಖಾತರಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಪಿಎಂ ಕಿಸಾನ್ ಮುಂತಾದ ಯೋಜನೆಗಳ ಪ್ರಯೋಜನವನ್ನೂ ಕೃಷಿಕರು ಪಡೆಯಬೇಕು ಎಂದು ವಿವರಿಸಿದರು

ಕೃಷಿ ಮೂಲಸೌಕರ್ಯಕ್ಕೆ 6,540 ಕೋಟಿ ರೂ.: ಕೇಂದ್ರ ಸಕಾರ ಇದುವರೆಗೆ ಅಗ್ರಿಕಲ್ಚರ್ ಇನ್ಪ್ರಾ ಫಂಡ್​ಗೆ ಬೇಡಿಕೆ ಇರಿಸಿ ಬಂದ 16,026 ಅರ್ಜಿಗಳ ಒಟ್ಟು ಮೌಲ್ಯ 10,627 ಕೋಟಿ ರೂಪಾಯಿ. ಈ ಪೈಕಿ, 9000ಕ್ಕೂ ಹೆಚ್ಚು ಅರ್ಜಿಗಳನ್ನು ಅಂಗೀಕರಿಸಿ, 6,540 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ತೋಮರ್ ರಾಜ್ಯಸಭೆಗೆ ತಿಳಿಸಿದರು.

ರಾಜ್ಯಸಭೆಯಲ್ಲಿ...

  • ನೀಟ್ ವಿನಾಯಿತಿ ಮಸೂದೆಯನ್ನು ತಮಿಳುನಾಡು ರಾಜ್ಯಪಾಲರು ಹಿಂದಿರುಗಿಸಿದ್ದನ್ನು ಖಂಡಿಸಿ ಡಿಎಂಕೆ, ಕಾಂಗ್ರೆಸ್, ಟಿಎಂಸಿ ಸದಸ್ಯರ ಸಭಾತ್ಯಾಗ.
  • ದೇಶಾದ್ಯಂತ 2014-21ರ ಅವಧಿಯಲ್ಲಿ 4.28 ಕೋಟಿ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದರು.
  • ಸಂವಿಧಾನದ ಪೀಠಿಕೆ ತಿದ್ದುಪಡಿ ಕುರಿತ ಖಾಸಗಿ ಸದಸ್ಯರ ಮಸೂದೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ್ದು ಸದನ. ಸಭಾಧ್ಯಕ್ಷರಲ್ಲ ಎಂದು ರಾಜ್ಯಸಭೆ ಡೆಪ್ಯೂಟಿ ಚೇರ್​ವುನ್ ಹರಿವಂಶ್ ನಾರಾಯಣ ಸಿಂಗ್ ಸ್ಪಷ್ಟಪಡಿಸಿದರು.
  • ಸೋಷಿಯಲ್ ಮೀಡಿಯಾಗಳನ್ನು ಹೆಚ್ಚು ಬದ್ಧತೆಯುಳ್ಳ ವೇದಿಕೆಯನ್ನಾಗಿ ಮಾಡುವಲ್ಲಿ ಸರ್ಕಾರ ಅವುಗಳನ್ನು ನಿಯಮಗಳ ಚೌಕಟ್ಟಿನ ವ್ಯಾಪ್ತಿಗೆ ತಂದಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.