ನ್ಯೂಸ್

ಕೋವಿಡ್ ಅಕ್ರಮ ವರದಿ ತಪಾಸಣೆಗೆ ಸಮಿತಿ ರಚನೆ: ಸಚಿವ ಎಚ್.ಕೆ.ಪಾಟೀಲ | Irregularity in health department

ಬೆಂಗಳೂರು: ಕೋವಿಡ್ ಅಕ್ರಮದ ಕುರಿತು ವಿಚಾರಣೆ ನಡೆಸಿ ನ್ಯಾ.ಮೈಕೆಲ್ ಡಿ.ಕುನ್ಹಾ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ದೊಡ್ಡದಿದೆ. ಹೀಗಾಗಿ ತಪಾಸಣೆಗೆ 2-3 ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟದ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಹಿರಿಯ ಅಧಿಕಾರಿಗಳು ಸಮಿತಿಯಲ್ಲಿರಲಿದ್ದಾರೆ. ಯಾರ‌್ಯಾರು ಸಮಿತಿಗಳಲ್ಲಿ ಇರಬೇಕು ಎಂಬುದನ್ನು ಡಿಸಿಎಂ ತೀರ್ಮಾನಿಸುತ್ತಾರೆ ಎಂದರು.

ಕೋವಿಡ್ ಅಕ್ರಮದ ಾಲೋಅಪ್, ಅನುಸರಣಾ ಕ್ರಮಗಳ ಬಗ್ಗೆ ಚರ್ಚಿಸಿದ್ದು, ಕುನ್ಹಾ ವರದಿ ಆಧರಿಸಿ ಕೆಲವು ಇಲಾಖೆಗಳಲ್ಲಿ ಕ್ರಮಗಳು ಶುರುವಾಗಿವೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪಿಪಿಇ ಕಿಟ್ ಖರೀದಿ ಸಮಗ್ರವಾಗಿ ಪರಿಶೀಲನೆಯಾಗಿದೆ.

ಆರೋಗ್ಯ ಇಲಾಖೆ ಅಕ್ರಮ

ವೈದ್ಯಕೀಯ ಶಿಕ್ಷಣ ಇಲಾಖೆ ಪಿಪಿಇ ಕಿಟ್‌ಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಕೆಲವು ದೂರು ಸಲ್ಲಿಕೆಯಾಗಿದ್ದು, ಇನ್ನೂ ಕೆಲವು ಕೇಸ್‌ಗಳನ್ನು ದಾಖಲಿಸುವ ಬಗ್ಗೆ ಚರ್ಚೆಯಾಗಿದೆ.

ಆರೋಗ್ಯ ಇಲಾಖೆಯಲ್ಲೂ ಅಕ್ರಮ ನಡೆದಿರುವುದು ಪ್ರಸ್ತಾಪವಾಗಿದೆ. ಅವಧಿ ಮುಗಿದ ಔಷಧಿ ಖರೀದಿ ದೃಢಪಟ್ಟಿಸಿರುವ ಕಾರಣ ತಕ್ಷಣ ಕ್ರಮಕ್ಕೆ ಸೂಚಿಸಲಾಗಿದೆ. ಹೆಚ್ಚುವರಿ 77 ಕೋಟಿ ರೂ. ಬಿಲ್ ಪಾವತಿ ವಿರುದ್ಧವೂ ಆರೋಗ್ಯ ಇಲಾಖೆ ಆದಷ್ಟು ಕ್ರಮವಹಿಸಲಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.

ಬಿಬಿಎಂಪಿಯಲ್ಲಿ ಸುಮಾರು ಜನರಿಗೆ ನೋಟಿಸ್ ನೀಡಿದ್ದೇವೆ. ಈ ಪೈಕಿ 52 ಜನರು ಕಾಲಾವಕಾಶ ಕೇಳಿದ್ದರೆ, 31 ಜನರು ಉತ್ತರಿಸಿದ್ದಾರೆ. 29 ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂತಹ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ.

ಕಾನೂನಾತ್ಮಕವಾಗಿ ಶಿಸ್ತಿನ ಕ್ರಮಕ್ಕೆ ಸಮಿತಿ ಶಿಾರಸು ಮಾಡುತ್ತದೆ. ಅವಧಿ ಮುಗಿದ 57 ಕೋಟಿ ರೂ. ಮೌಲ್ಯದ ಔಷಧಿ ಖರೀದಿಯು ಕುನ್ಹಾ ವರದಿಯಲ್ಲಿ ಉಲ್ಲೇಖವಾಗಿದೆ. ಹೆಚ್ಚುವರಿ ಹಣ ಪಾವತಿ, ಪೂರೈಕೆ ಬಗ್ಗೆಯೂ ವಿವರವಿದೆ ಎಂದು ತಿಳಿಸಿದರು.

ಚಾಮರಾಜನಗರ ವರದಿ ತಿರಸ್ಕೃತ

ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದ ಬಗ್ಗೆ ಅಧಿಕಾರಿಗಳ ವರದಿಯನ್ನು ತಿರಸ್ಕರಿಸಿದ್ದು, ನ್ಯಾ.ಕುನ್ಹಾ ಸಮಿತಿ ಪರಿಶೀಲಿಸಲಿದೆ. ಅಕ್ರಮದ ವಿಚಾರಣೆಯ ಬಗ್ಗೆ ಪೂರ್ಣ ಪ್ರಮಾಣದ ವರದಿ ಇನ್ನೂ ಸಲ್ಲಿಕೆಯಾಗಬೇಕಾಗಿದೆ ಎಂದರು.

ಕೋವಿಡ್ ಕಾಲದಲ್ಲಿ ತೆಗೆದುಕೊಂಡಿದ್ದ ದಾಸ್ತಾನು ವೀಕ್ಷಣೆಗೆ ಸಭೆಯಲ್ಲಿ ತೀರ್ಮಾನಿಸಿದ್ದು, 15 ದಿನಗಳಲ್ಲಿ ಸಚಿವ ಸಂಪುಟದ ಉಪ ಸಮಿತಿ ಸ್ಥಳ ಪರಿಶೀಲಿಸಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.