ಸಾಗರ: ಮಲೆನಾಡಿನ ಜನರ ಆರಾಧ್ಯ ದೈವ ಶ್ರೀ ಸಿಗಂದೂರೇಶ್ವರಿ ಕೃಪೆಯಿಂದ ನಾಡಿನೆಲ್ಲೆಡೆ ಉತ್ತಮ ಮಳೆಯಾಗಿದೆ. ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ. ಇದರಿಂದ ಸಹಜವಾಗಿ ಸಂತಸ ಮೂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಸೋಮವಾರ ಸಿಗಂದೂರು ದಸರಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ನೆರವು ನೀಡುತ್ತಿವೆ ಎಂದರು.
ಹಲವು ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಹಿತ ಕಾಯಲು ಸರ್ಕಾರ ಹಿಂದೆ ಹೇಳಿದ ಮಾತಿಗೆ ಬದ್ಧವಾಗಿದೆ. ಅರಣ್ಯಗಳಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಸರ್ಕಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಅದಕ್ಕೆ ಸಂಬಂಧಿಸಿ ಹಾಗೂ ಸುಪ್ರೀಂ ಕೋರ್ಟ್ ಸೂಚನೆಯಂತೆ ಸಮೀಕ್ಷಾ ಕಾರ್ಯ ಪೂರ್ಣವಾಗಿದ್ದು, ವರದಿಯನ್ನು ಸಲ್ಲಿಸಲಾಗಿದೆ. ಸಂತ್ರಸ್ತರು ಆತಂಕಪಡುವ ಅಗತ್ಯವಿಲ್ಲ ಎಂದರು.
ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆಯಿದೆ. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಸಹ ಕೋರಿದ್ದೇವೆ. ಕಾಗೋಡು ತಿಮ್ಮಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಭೂಮಿ ಹಕ್ಕಿಗೆ ಸಂಬಂಧಿಸಿ ಹಲವು ಶಾಸನಗಳನ್ನು ರೂಪಿಸುವಲ್ಲಿ ವಿಶೇಷ ಕ್ರಮ ಕೈಗೊಂಡಿರುವುದನ್ನು ಎಂದಿಗೂ ಮರೆಯುವಂತಿಲ್ಲ ಎಂದರು
ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಎಸ್.ರಾಮಪ್ಪ ಮಾತನಾಡಿ, ಸಿಗಂದೂರು ದೇವಾಲಯಕ್ಕೆ ಬರುವ ಭಕ್ತರಿಗೆ ಸೇತುವೆ ನಿರ್ಮಾಣವಾಗಿರುವುದು ತುಂಬ ಅನುಕೂಲವಾಗಿದೆ. ಆದರೆ ಮುಪ್ಪಾನೆ ಭಾಗದಿಂದ ಓಡಾಡುವವ ಜನರಿಗೆ ದೊಡ್ಡ ಲಾಂಚ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
‘ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ’ ಯೋಜನೆಯಡಿ ದೇವಸ್ಥಾನದಿಂದ ಹುರುಳಿ, ಕಟ್ಟಿನಕಾರು, ಮರಾಠಿ ಅಂಬಾರಗುಡ್ಡ ಶಾಲೆಗಳಿಗೆ ಬಣ್ಣದ ಡಬ್ಬಗಳನ್ನು ವಿತರಿಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಚಿತ್ರನಟಿ ಕಾರುಣ್ಯಾ ರಾಮ್, ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ, ರಮೇಶ್, ಫಯಾಜ್ ಇತರರಿದ್ದರು.