ನ್ಯೂಸ್

ಜಾತ್ಯತೀತತೆಗೆ ಬದ್ಧರಾಗಿ; ಸಿಎಂ ಪಾಠ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಮೊಟ್ಟ ಮೊದಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿ ವೃಂದಕ್ಕೆ ಚಳಿಬಿಡಿಸಿದ್ದಾರೆ. ‘ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ಧ್ದರಾಗಿರಬೇಕು. ಇಲ್ಲವಾದಲ್ಲಿ ಅಂಥವರಿಗೆ ಇಲ್ಲಿ ಮುಂದುವರೆಯಲು ಹಕ್ಕಿಲ್ಲ, ಅವಕಾಶವೂ ಇಲ್ಲ’ ಎಂದು ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಶೀಲ್ದಾರ್ ಮತ್ತು ಎಸಿ ಹಾಗೂ ಡಿಸಿ ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ತಹಶೀಲ್ದಾರ್, ಎಸಿ, ಡಿಸಿ ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಿದೆಯೇ? ಜನ ಹೆಚ್ಚು ಹೋಗುವುದು ಕೃಷಿ, ಕಂದಾಯ, ಪೊಲೀಸ್ ಇಲಾಖೆ, ಠಾಣೆಗಳಿಗೆ ಬರುತ್ತಾರೆ. ನೀವು ಎಷ್ಟು ಕಡೆಗಳಿಗೆ ಭೇಟಿ ನೀಡಿದ್ದೀರಿ? ಜನರ ಅರ್ಜಿಗಳು ಎಷ್ಟು ದಿನಗಳಿಂದ ಬಾಕಿ ಇವೆ ಪರಿಶೀಲನೆ ನಡೆಸಿದ್ದೀರಾ? ಎಷ್ಟು ಬಾಕಿ ಅರ್ಜಿ ನಿಮ್ಮಿಂದ ಬಗೆಹರಿದಿದೆ? ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಎಷ್ಟು ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ? ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುತ್ತಿದೆಯಾ? ಎಷ್ಟು ಕಚೇರಿಗಳಿಗೆ, ಹಾಸ್ಟೆಲ್, ಶಾಲೆಗಳಿಗೆ, ಭೇಟಿ ನೀಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೇ, ವಿವರಗಳನ್ನು ಸಹ ಪಡೆದುಕೊಂಡರು. ಕೋಲಾರದ ಹಾಸ್ಟೆಲ್ನಲ್ಲಿ ಊಟದಲ್ಲಿ ಆದ ಸಮಸ್ಯೆಗೆ ಯಾರು ಹೊಣೆ? ಸಮಸ್ಯೆ ಯಾಕಾಯ್ತು? ಮೊದಲೇ ಅಧಿಕಾರಿಗಳು ಈ ಬಗ್ಗೆ ನಿಗಾ ಇಡಬೇಕಿತ್ತು. ನಿಗಾ ವಹಿಸದ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ಇವು ಮರುಕಳಿಸಿದರೆ ಸೂಕ್ತ ಕ್ರಮ ಅನಿವಾರ್ಯವಾಗುತ್ತದೆ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಡೈರಿ ನಿರ್ವಹಣೆ ಮಾಡಬೇಕು, ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ತಮ್ಮ ತಮ್ಮ ಉಸ್ತುವಾರಿಯ ಜಿಲ್ಲೆಗಳಿಗೆ ಭೇಟಿ ನೀಡುವುದು ಕಡ್ಡಾಯ ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು. ಮಾನವ-ವನ್ಯಪ್ರಾಣಿ ಸಂಘರ್ಷದ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಸಿಎಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಜಿಲ್ಲೆಯಲ್ಲಿ ವನ್ಯಪ್ರಾಣಿಗಳು ರೈತರ ಜಮೀನಿಗೆ, ತೋಟಕ್ಕೆ ನುಗ್ಗಲು ಆಹಾರ, ನೀರಿನ ಕೊರತೆಯೇ ಕಾರಣ. ಅರಣ್ಯದೊಳಗೆಯೇ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಅದೇ ರೀತಿ ಜಾನುವಾರುಗಳಿಗೆ ಮೇವು ಸಾಲದೆ ಇದ್ದರೆ, ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. 20 ಕೋಟಿ ರೂ. ಮೇವು ಮಿನಿಕಿಟ್ ವಿತರಣೆ ಕುರಿತು ಸಂಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅಹಮದ್, ಸಿಎಂ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಲ್ಕು ಪ್ರಮುಖ ಸಂಗತಿಗಳು

1. ಗ್ಯಾರಂಟಿ ಸಮಸ್ಯೆ ಏಕೆ?

ಕೆಲವು ಕಡೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೆಲವೇ ಕೆಲವು ಫಲಾನುಭವಿಗಳಿಗೆ ತಲುಪಲು ಆಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಇನ್ನೂ ಏಕೆ ಆಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಸಿಎಂ, ಕೆಲವರಿಗೆ ಮಾತ್ರ ಗ್ಯಾರಂಟಿ ಅನುಕೂಲ ತಲುಪಿಲ್ಲ. ಈ ಕೆಲವರೇ ಹೆಚ್ಚು ಹೇಳಿಕೊಂಡು ತಿರುಗುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಅನುಕೂಲ ಪಡೆಯುತ್ತಿರುವವರು ಮೌನವಾಗಿದ್ದಾರೆ. ಮೊದಲು ತಾಂತ್ರಿಕ ಸಮಸ್ಯೆ ಬಗೆಹರಿಸಿ, ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎನ್ನುವ ಸೂಚನೆ ನೀಡಿದರು.

2. ನಿಮ್ಮಿಂದಾದ ಲಾಭವೇನು?

ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ? ನಿಮ್ಮಿಂದ ಜಿಲ್ಲಾಡಳಿತಕ್ಕೆ ಏನು ಸಲಹೆ ಸಿಕ್ಕಿದೆ? ನಿಮ್ಮ ಅನುಭವದ ಅನುಕೂಲ ಜಿಲ್ಲೆಗಳಿಗೆ ಎಷ್ಟಾಗಿದೆ ಎಂದು ಸಿಎಂ ಪ್ರಶ್ನಿಸಿದರು. ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

3. ಬರ ತೀವ್ರ ಸಾಧ್ಯತೆ

ಮುಂದಿನ ತಿಂಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆ ಇದೆ. ಆಗ ಬರಗಾಲದ ಸಮಸ್ಯೆ ಜನರಿಗೆ ತಟ್ಟದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಉದ್ಯೋಗ, ಮೇವು ಲಭ್ಯತೆ ಖಾತರಿಪಡಿಸಿ. ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‌ಪುಟ್ ಸಬ್ಸಿಡಿ ವಿತರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು. ಆಯಾ ಜಿಲ್ಲೆಯ ರಸ್ತೆ ಸಾರಿಗೆ ನಿಗಮದ ಡಿಸಿಗಳೊಂದಿಗೆ ಸಭೆ ನಡೆಸಿ, ಬಸ್ ಕೊರತೆ, ಸ್ಥಗಿತಗೊಳಿಸಿರುವ ಮಾರ್ಗಗಳು, ಬಸ್ ಸೇವೆಯಲ್ಲಿನ ವ್ಯತ್ಯಯ ವಿಷಯ ಕುರಿತು ಚರ್ಚಿಸಿ, ಸಮಸ್ಯೆ ಬಗೆಹರಿಸಬೇಕು ಎಂದರು.

4. ಶಿಸ್ತುಕ್ರಮದ ಎಚ್ಚರಿಕೆ

ಫೆಬ್ರುವರಿ 8 ರಂದು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದರು. ಕಳೆದ ಜನತಾ ಸ್ಪಂದನದಲ್ಲಿ ಬಂದ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಿಕೊಡಿ ಎನ್ನುವ ಸೂಚನೆ ನೀಡಿದ್ದೆ. ಸದ್ಯ ಸಮಾಧಾನಕರವಾಗಿ ಕೆಲಸ ಮಾಡಿದ್ದೀರಿ. ಇದರ ಪ್ರಮಾಣ ಮತ್ತು ವೇಗವನ್ನು ಇನ್ನಷ್ಟು ಹೆಚ್ಚಿಸಿ ಎನ್ನುವ ಸೂಚನೆ ನೀಡಿದರು.