ಸೋಮವಾರಪೇಟೆ ತಾಲೂಕು ಮಾದಾಪುರ ಡಿ.ಚನ್ನಮ್ಮ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ನಶೆಮುಕ್ತ ಭಾರತ ಅಭಿಯಾನದ ಕುರಿತು ಶಿಬಿರಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ಟಿ.ಜಿ.ಪ್ರೇಮಕುಮಾರ್, ಸಿ.ಜಿ.ಮಂದಪ್ಪ, ಮನೋಹರ್, ಮೋಹನ್ ಹೆಗ್ಡೆ ಇದ್ದರು. 
ನ್ಯೂಸ್

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಡಿ

ಎಂ.ರವಿ

ಸೋಮವಾರಪೇಟೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನಾಂಗ ಸಂಕಲ್ಪ ತೊಡಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಾಪುರ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಶೆಮುಕ್ತ ಭಾರತ ಅಭಿಯಾನ 2025 ಎಂಬ ಕೇಂದ್ರ ವಿಷಯದಡಿ ಗರಗಂದೂರು ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿದರು.

ಆರೋಗ್ಯಕ್ಕೆ ಹಾನಿಯುಂಟು ಮಾಡುವ ಮದ್ಯಪಾನ, ಧೂಮಪಾನ, ಗಾಂಜಾ, ಅಫೀಮು ಮತ್ತು ಡ್ರಗ್ಸ್ ಮತ್ತಿತರ ದುಶ್ಚಟಗಳಂತಹ ಸಾಮಾಜಿಕ ಪಿಡುಗುಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಮತ್ತು ಜೀವನ ಕಂಡುಕೊಳ್ಳಬೇಕು ಎಂದು ಹೇಳಿದರು.

ಯುವಕರು ದೇಶದ ಸಂಪತ್ತು. ಸಮೃದ್ಧ ಭಾರತವನ್ನು ಕಟ್ಟುವ ಕೆಲಸಕ್ಕೆ ಕೈ ಜೋಡಿಸಬೇಕು. ಮಾದಕ ವ್ಯಸನಗಳಿಗೆ ದಾಸನಾದನೆಂದರೆ ಕಾಸು ಕೊಟ್ಟು ರೋಗಗಳನ್ನು ಅಂಟಿಸಿಕೊಂಡಂತೆ. ಮಾದಕ ವಸ್ತುಗಳ ಬಳಕೆಯಿಂದ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲನಾಗುತ್ತಾನೆ. ಓದಿನಲ್ಲಿ ಆಸಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಮೆದುಳು, ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಹೀಗೆ ಹಲವು ಮಾರಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಎಂದರು.

ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಣ್ಣ, ಸಹ ಶಿಬಿರಾಧಿಕಾರಿ ಎಸ್.ಮೋಹನ್ ಹೆಗ್ಡೆ, ಹರದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಕೆ.ರಮೇಶ್, ಕುಸುಮಾ, ರಾಯಲ್ ಫಾರ್ಮ ಕ್ಲಬ್ ಅಧ್ಯಕ್ಷ ಎಂ.ಇ.ನಂದಕುಮಾರ್ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎನ್.ಎನ್.ಮನೋಹರ್ ಇದ್ದರು. ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆ ಹಾಡಿದರು. ಶಿಬಿರಾರ್ಥಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು.