Commercial LPG Cylinder : ದೇಶದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಅಡುಗೆ ಅನಿಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರತಿ 19 ಕೆಜಿ ಸಿಲಿಂಡರ್‌ಗೆ 41 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಬೃಹತ್ ಅಡುಗೆ ಇಂಧನವನ್ನು ಅವಲಂಬಿಸಿರುವ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಭಾರಿ ಅನುಕೂಲವಾಗಲಿದೆ.
ಇಂದಿನಿಂದ ಹೊಸ ಹಣಕಾಸು ವರ್ಷ ಹಿನ್ನೆಲೆಯಲ್ಲಿ ಅನೇಕ ನಿಯಮಗಳು ಬದಲಾಗಲಿದ್ದು, ಇದರ ಬೆನ್ನಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ (ಏಪ್ರಿಲ್ 1) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತವನ್ನು ಘೋಷಿಸಿವೆ.
19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ 41 ರೂಪಾಯಿ ಕಡಿತಗೊಳಿಸಲಾಗಿದೆ. ದಿನನಿತ್ಯದ ಕಾರ್ಯಾಚರಣೆಗಾಗಿ ಈ ಸಿಲಿಂಡರ್‌ಗಳನ್ನು ಅವಲಂಬಿಸಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಉದ್ಯಮಗಳು ಎದುರಿಸುತ್ತಿರುವ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,762 ರೂ.ಗಳಿಗೆ ತಲುಪಿದ್ದು, ಇದು ಮೊದಲು 1,803 ರೂ.ಗಳಷ್ಟಿತ್ತು. ಮುಂಬೈನಲ್ಲಿ 1,714.50 ರೂ.ಗೆ ಇಳಿದಿದೆ. ಈ ಮೊದಲು 1,755.50 ರೂ. ಇತ್ತು. ಇನ್ನು ಕೋಲ್ಕತ್ತದಲ್ಲಿ 1,872 ರೂ.ಗೆ ಇಳಿದಿದೆ. ಈ ಮೊದಲು 1,913 ರೂ. ಇತ್ತು. ಚೆನ್ನೈನಲ್ಲಿ 1,924.50 ರೂ.ಗೆ ಇಳಿದಿದೆ. ಈ ಮೊದಲು 1,965.50 ರೂ. ಇತ್ತು. ಇನ್ನು ಕಳೆದ ತಿಂಗಳು, ವಾಣಿಜ್ಯ ಸಿಲಿಂಡರ್ ಬೆಲೆಯನ್ನು 6 ರೂ.ಗೆ ಹೆಚ್ಚಿಸಲಾಗಿತ್ತು.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಕಡಿಮೆ ಮಾಡುವ ನಿರ್ಧಾರವು ಏರಿಳಿತದ ವೆಚ್ಚಗಳೊಂದಿಗೆ ಹೋರಾಡುತ್ತಿರುವ ವ್ಯವಹಾರಗಳಿಗೆ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಅಂದಹಾಗೆ ಈ ಬೆಲೆ ಪರಿಷ್ಕರಣೆಯು ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾಗದೆ ಉಳಿದಿವೆ. (ಏಜೆನ್ಸೀಸ್)