ನ್ಯೂಸ್

19 ರಂದು ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

ಬೆಂಗಳೂರು/ತುಮಕೂರು: ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಜ.19ರಂದು ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಿದ್ಧಗಂಗಾ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಉಪಸ್ಥಿತರಿರುವರು.

ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್, ಶಾಸಕ ಡಾ.ಜಿ.ಪರಮೇಶ್ವರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್ ಗರ್ಗ್ ಹಾಗೂ ನವದೆಹಲಿ ಉಗ್ರ ನಿಗ್ರಹ ದಳದ ಮುಖ್ಯಸ್ಥ ಮಣೀಂದರ್ ಜೀತ್ ಸಿಂಗ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಲಕ್ಷ ಭಕ್ತರ ನಿರೀಕ್ಷೆ: ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೋತ್ಸವಕ್ಕೆ ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಏಳು ಕಡೆ ಪ್ರಸಾದ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ, ಶ್ರೀಗಳು ಹಿಂದೆ ನಿರ್ದೇಶಿಸಿದಂತೆ ಎಲ್ಲರಿಗೂ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ತುಮಕೂರಿನಲ್ಲಿ ತಿಳಿಸಿದರು. ಭಕ್ತರಿಗೆ ಬೆಳಗ್ಗೆಯಿಂದಲೇ ತಿಂಡಿ, ಊಟದ ವ್ಯವಸ್ಥೆ ಮಾಡ ಲಾಗಿದ್ದು, ಮಠದ ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ಎಸ್​ಐಟಿ ನಿರ್ದೇಶಕ ಎಂ.ಎನ್. ಚನ್ನಬಸಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂಜುಂಡಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಕೈಪಿಡಿ, ವೆಬ್​ಸೈಟ್ ಲೋಕಾರ್ಪಣೆ: ಸಿ.ಎಸ್.ಸದಾಶಿವಯ್ಯ ವಿರಚಿತ ‘ಶ್ರೀಗುರು ಕರುಣೆ ಮತ್ತು ನಿಷ್ಠೆ’, ಬ್ಯಾಲಕೆರೆ ಶಿವಣ್ಣ ವಿರಚಿತ ‘ಯೋಗಾಂಗ ತ್ರಿವಿಧಿ’ ಹಾಗೂ ಮುದ್ದೇನಹಳ್ಳಿ ನಂಜಯ್ಯ ವಿರಚಿತ ‘ಶ್ರೀಶಿವಕುಮಾರ ಚರಿತೆ’ ಪುಸ್ತಕ ಬಿಡುಗಡೆಯಾಗಲಿದೆ. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್​ನಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್​ಸೈಟ್ ಲೋಕಾರ್ಪಣೆಯಾಗಲಿದ್ದು, ಸಂಜೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.