ಶಿವಮೊಗ್ಗ: ಶಿವಮೊಗ್ಗ ಬೆಕ್ಕಿನಕಲ್ಮಠದ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ ಸ್ಮರಣೋತ್ಸವ ಸಮಿತಿ ಮತ್ತು ಭಕ್ತ ಮಂಡಳಿಯಿಂದ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 113ನೇ ಪುಣ್ಯಸ್ಮರಣೋತ್ಸವ, ಅನುಭಾವ, ಶರಣ ಸಾಹಿತ್ಯ, ಭಾವೈಕ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.16ರಿಂದ 18ರವರೆಗೆ ಬೆಕ್ಕಿನಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಶೂನ್ಯ ಪೀಠಾಧ್ಯಕ್ಷ ಅಲ್ಲಮಪ್ರಭು ಪರಂಪರೆಯ ಕೆಳದಿ ಅರಸರಿಂದ ಗೌರವ ಪಡೆದ ಪ್ರಮುಖ ಧರ್ಮಪೀಠ ಆನಂದಪುರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ. ತಪಸ್ವಿ, ಪಂಡಿತ, ಕವಿ, ಪೂಜ್ಯರನ್ನು ಪಡೆದ ಹೆಗ್ಗಳಿಗೆ ಶ್ರೀ ಪೀಠದ್ದು. ಈ ಪರಂಪರೆಯಲ್ಲಿ 14ನೇ ಜಗದ್ಗುರು ಗುರುಬಸವ ಮಹಾಶಿವಯೋಗಿಗಳವರ ಹೆಸರು ಸ್ಮರಣೀಯ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವಮೊಗ್ಗದ ಬೆಕ್ಕಿನ ಕಲ್ಮಠದ ಸ್ಥಾಪಕರೂ ಆದ ಗುರುಬಸವ ಶ್ರೀಗಳು ಬಸವಾದಿ ಶರಣರ ಧರ್ಮ ಸಂದೇಶ, ಸಾಹಿತ್ಯ, ಸಂಸ್ಕೃತಿಯನ್ನು ಪ್ರಸಾರ ಮಾಡಿ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರ ಸ್ಮರಣಾರ್ಥ ಮೂರು ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 16ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾಂಸ್ಕೃತಿಕ ವಚನ ಗಾಯನ ಸ್ಪರ್ಧೆಯನ್ನು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸುವರು. ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಗುತ್ತಲ, ಬಿಳಕಿ, ತಾವರೆಕೆರೆ, ಹಾರನಹಳ್ಳಿ ಚೌಕಿಮಠದ ಶ್ರೀಗಳು ಪಾಲ್ಗೊಳ್ಳುವರು ಎಂದರು.
ಸಂಜೆ 5ಕ್ಕೆ ಅನುಭಾವ ಸಮ್ಮೇಳನವನ್ನು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಕಾಗಿನೆಲೆ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಗೋಪಾಲಕೃಷ್ಣ ಬೇಳೂರು, ಎಂಎಲ್‌ಸಿ, ಮಾಜಿ ಎಂಎಲ್‌ಸಿಗಳು ಭಾಗವಹಿಸುವರು. ಹೊನ್ನಾವರದ ಸಾಹಿತಿ, ವೈದ್ಯೆ ಡಾ. ಎಚ್.ಎಸ್.ಅನುಪಮಾ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಎಸ್.ಶಿವಾನಂದ ಪ್ರಧಾನ ಉಪನ್ಯಾಸ ಮಾಡುವರು ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಾ. ಸಿ.ರೇಣುಕಾರಾಧ್ಯ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಸಂತೋಷ್ ಬಳ್ಳೇಕೆರೆ, ಕೆ.ಆರ್.ಸೋಮನಾಥ, ಬಿ.ಶಿವರಾಜ್ ಇತರರಿದ್ದರು.
ಡಾ. ವೀರಣ್ಣಗೆ ಅಲ್ಲಮಪ್ರಭು ಪ್ರಶಸ್ತಿ
ಜ.17ರಂದು ಸಂಜೆ 5ಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಿನದರ್ಶಿಕೆ ಬಿಡುಗಡೆಗೊಳಿಸುವರು. ಬಳಿಕ ಅಲ್ಲಮಪ್ರಭು ಪ್ರಶಸ್ತಿಯನ್ನು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅವರಿಗೆ ಪ್ರದಾನ ಮಾಡಲಾಗುವುದು. ಸಾಹಿತಿ ಪ್ರಕಾಶ್ ಗಿರಿಮಲ್ಲವರ ಪ್ರಧಾನ ಉಪನ್ಯಾಸ ಮಾಡುವರು ಎಂದು ಬೆಕ್ಕಿನಕಲ್ಮಠದ ಶ್ರೀಗಳು ತಿಳಿಸಿದರು.
ಟಿ.ಎಸ್.ನಾಗಾಭರಣಗೆ ಗುರುಬಸವಶ್ರೀ ಪುರಸ್ಕಾರ
ಜ.18ರಂದು ಸಂಜೆ 5ಕ್ಕೆ ಭಾವೈಕ್ಯ ಸಮ್ಮೇಳನವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್ವರ, ಆರಗ ಜ್ಞಾನೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಭಾಗವಹಿಸುವರು. ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.